ಕರ್ನಾಟಕ

karnataka

ಉತ್ತರ ಕನ್ನಡದಲ್ಲಿ ಮುಂದುವರಿದ ಗುಡ್ಡ ಕುಸಿತ: ಶಿರೂರು ಪ್ರಕರಣದ 7 ಮಂದಿ ಮೃತದೇಹ ಪತ್ತೆ, ಮತ್ತೆ ಮೂವರಿಗಾಗಿ ಹುಡುಕಾಟ - Shiruru landslide Case

By ETV Bharat Karnataka Team

Published : Jul 19, 2024, 4:23 PM IST

ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಅಲ್ಲಲ್ಲಿ ಗುಡ್ಡ ಕುಸಿತವಾಗುತ್ತಿವೆ. ಇನ್ನು ಶಿರೂರು ಪ್ರಕರಣದಲ್ಲಿ 7 ಮಂದಿ ಮೃತದೇಹ ಪತ್ತೆಯಾಗಿದ್ದು, ಇನ್ನುಳಿದ ಮೂವರಿಗಾಗಿ ಹುಡುಕಾಟ ನಡೆಯುತ್ತಿದೆ.

CONTINUED LANDSLIDES  DEAD BODIES  UTTARA KANNADA
ಶಿರೂರು ಪ್ರಕರಣದ 7 ಮಂದಿ ಮೃತದೇಹ ಪತ್ತೆ, ಮತ್ತೆ ಮೂವರಿಗೆ ಹುಡುಕಾಟ (ETV Bharat)

ಕಾರವಾರ: ಶಿರೂರು ಬಳಿ ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದವರ ಪೈಕಿ ಒಟ್ಟು 7 ಮಂದಿ ಮೃತದೇಹ ಗುರುವಾರ ಪತ್ತೆಯಾಗಿದೆ. ಇನ್ನು ಮೂವರಿಗಾಗಿ ಗುಡ್ಡ ಕುಸಿತ ಪ್ರದೇಶ ಹಾಗೂ ಗಂಗಾವಳಿ ನದಿಯಲ್ಲಿ ರಕ್ಷಣಾ ತಂಡಗಳಿಂದ ನಿರಂತರವಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.

ಅಂಕೋಲಾ ಶಿರೂರು ಅವಘಡದಲ್ಲಿ ಒಟ್ಟು 10 ಮಂದಿ ನಾಪತ್ತೆಯಾಗಿದ್ದಾರೆ. ಎಚ್​ಪಿಸಿಎಲ್ ನ 1, ಬಿಪಿಸಿಎಲ್​ನ 2 ಸೇರಿ ಮೂರು ಟ್ಯಾಂಕರ್ ಹಾಗೂ ಒಂದು ಲಾರಿ ಮಿಸ್ಸಿಂಗ್ ಆಗಿರುವ ಸಂಬಂಧಪಟ್ಟ ಕಂಪನಿಯವರು ದೂರು ದಾಖಲಿಸಿದ್ದಾರೆ. ಎಲ್ಲ ಟ್ಯಾಂಕರ್​ಗಳಲ್ಲಿಯೂ ಒಬ್ಬೊಬ್ಬರು ಚಾಲಕರು ಇದ್ದರು. ಈ ಪೈಕಿ ತಮಿಳುನಾಡು ನಾಮಕಲ್ ಮೂಲದ ಚಿನ್ನನ್ (56), ತಮಿಳುನಾಡಿನ ಮುರುಗನ್(46) ಮೃತದೇಹ ಪತ್ತೆಯಾಗಿದೆ. ಇನ್ನೊಬ್ಬ ಚಾಲಕನ ಸುಳಿವು ಪತ್ತೆಯಾಗಬೇಕಿದೆ. ಈತ ಕೂಡ ತಮಿಳುನಾಡು ಮೂಲದವರಾಗಿದ್ದಾರೆ.

ಇನ್ನು ಜೋಯಿಡಾದ ರಾಮನಗರದಿಂದ ಕೇರಳಕ್ಕೆ ತೆರಳುತ್ತಿದ್ದ ಕಟ್ಟಿಗೆ ತುಂಬಿದ ಒಂದು ಲಾರಿ ಹಾಗೂ ಚಾಲಕ ಅರ್ಜುನ್ ನಾಪತ್ತೆಯಾಗಿದ್ದಾರೆ. ಲಾರಿಯ ಜಿಪಿಎಸ್ ಲೊಕೇಶನ್ ಘಟನಾ ಸ್ಥಳದಲ್ಲಿ ಕೊನೆಯಾಗಿರುವುದನ್ನು ಆಧರಿಸಿ ಅರ್ಜುನ್ ಸಂಬಂಧಿಕರು ಜಿಲ್ಲಾಡಳಿತವನ್ನು ಸಂಪರ್ಕಿಸಿದ್ದಾರೆ. ಶಿರೂರಿನಲ್ಲಿ ಹೊಟೇಲ್ ಇಟ್ಟುಕ್ಕೊಂಡಿದ್ದ ಲಕ್ಷ್ಮಣ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಮಗ ರೋಶನ್ ಮೃತದೇಹ ಘಟನೆ ನಡೆದ ದಿನವೇ ಗಂಗಾವಳಿ ನದಿ ದಂಡೆಯಲ್ಲಿ ಪತ್ತೆಯಾಗಿತ್ತು. ಆದರೆ ಮೃತ ಲಕ್ಷ್ಮಣ ನಾಯ್ಕ ಪುತ್ರಿ ಅವಂತಿಕಾ (6) ಮೃತದೇಹ ಗುರುವಾರ ಪತ್ತೆಯಾಗಿತ್ತು.

ಇದಲ್ಲದೇ ಅಂಕೋಲಾದ ಬೆಳಾಂಬರದ ಕಡಲತೀರದ ಬಳಿ ಕೇವಲ ಎರಡು ಕಾಲುಗಳು ಮಾತ್ರ ಇರುವ ಮತ್ತೊಂದು ಮೃತದೇಹ ಪತ್ತೆಯಾಗಿದೆ. ಇದು ಗುಡ್ಡಕುಸಿತದ ಪ್ರದೇಶದಿಂದ ಛಿದ್ರಗೊಂಡಿರುವುದೋ ಅಥವಾ ಬೆರೆ ಯಾವುದಾದರೂ ಮೃತದೇಹ ತೇಲಿ ಬಂದಿರುವುದೋ ಎಂದು ಅಧಿಕಾರಿಗಳು ಪರಿಶೀಲನೆ ನಡೆದುತ್ತಿದ್ದಾರೆ.

ಇನ್ನು ಇಬ್ಬರು ಲಾರಿ ಚಾಲಕರು, ಉಳುವರೆಯ ಸಣ್ಣಿ ಗೌಡ ಹಾಗೂ ಹೊಟೇಲ್‌ನಲ್ಲಿದ್ದ ಜಗನ್ನಾಥ ನಾಯ್ಕ ಎಂಬುವವರಿಗಾಗಿ ಎನ್​ಡಿಆರ್​ಎಫ್, ಎಸ್​ಡಿಆರ್​ಎಫ್ ತಂಡಗಳಿಂದ ನದಿಯಲ್ಲಿ ನಿರಂತರ ಹುಡುಕಾಟ ಮುಂದುವರಿಸಲಾಗಿದೆ. ಗುಡ್ಡಕುಸಿತದಿಂದ ಗಂಗಾವಳಿ ನದಿಗೆ ಉರುಳಿ ಅಂಕೋಲಾದ ಸಗಡಗೇರಿ ಬಳಿ ತೇಲಿ ಹೋಗಿರುವ ಎಚ್‌ಪಿ ಗ್ಯಾಸ್ ಟ್ಯಾಂಕರ್​ನಿಂದ ನೌಕಾನೆಲೆ, ಕೋಸ್ಟ್ ಗಾರ್ಡ್ ಹಾಗೂ ಕಂಪನಿಯ ತಜ್ಞ ತಂಡದಿಂದ ಅಗತ್ಯ ಮುಂಜಾಗೃತಾ ಕ್ರಮಗಳೊಂದಿಗೆ ಗ್ಯಾಸ್​​ ವಾತಾವರಣದಲ್ಲಿ ಬಿಡಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು, ಮೊಬೈಲ್, ವಾಹನ ಸಂಚಾರ ಸೇರಿದಂತೆ ಎಲ್ಲವನ್ನು ನಿಷೇಧ ಮಾಡಲಾಗಿದೆ. ಅಲ್ಲದೇ ಗ್ರಾಮಸ್ಥರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರೀಯಾ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 60 ಮೀಟರ್‌ವರೆಗೆ ಕುಸಿದಿರುವ ಗುಡ್ಡವನ್ನು ತೆರವು ಮಾಡಲು ನಾಲ್ಕನೇ ದಿನವೂ ನಿರಂತರವಾಗಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ. ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಅಡಚಣೆಯಾಗಿದ್ದು, ಇನ್ನು ಎರಡು ದಿನಗಳು ಮಣ್ಣು ತೆರವಿಗೆ ಬೇಕಾಗಬಹುದು ಎಂದು ಕಾರ್ಯಾಚರಣೆಯಲ್ಲಿ ತೊಡಗಿಕೊಂಡವರು ತಿಳಿಸಿದ್ದಾರೆ.

ಮುಂದುವರಿದ ಗುಡ್ಡ ಕುಸಿತ:ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಶುಕ್ರವಾರ ಮತ್ತೆ ಜೋರಾಗಿದೆ. ಭಾರಿ ಮಳೆಗೆ ಕುಮಟಾ ತಾಲ್ಲೂಕಿನ ಬರ್ಗಿ ಬಳಿ ರಾಷ್ಟ್ರೀಯ ಹೆದ್ದಾರಿ 66 ರರಲ್ಲಿ ಕುಸಿದ ಗುಡ್ಡದ ಮಣ್ಣನ್ನು ತೆರವು ಮಾಡಲಾಗುತ್ತಿದೆ. ಇನ್ನು ಕುಮಟಾ ಶಿರಸಿ ಹೆದ್ದಾರಿಯಲ್ಲಿಯೂ ಸತತ ನಾಲ್ಕನೇ ದಿನವೂ ತೆರವು ಕಾರ್ಯಾಚರಣೆ ಮುಂದುವರಿದೆ. ಜಿಲ್ಲೆಯಲ್ಲಿ ಸದ್ಯ ಹೆದ್ದಾರಿಗಳಲ್ಲಿ ಅಲ್ಲಲ್ಲಿ ಗುಡ್ಡಕುಸಿತಗಳು ಸಂಭವಿಸುತ್ತಿದ್ದು, ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಹಾಗೂ ಎನ್‌ಎಚ್‌ಎಐಎಲ್ ನಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.

ಓದಿ:ಪಶ್ಚಿಮ ಘಟ್ಟದಲ್ಲಿ ವರುಣನ ಅಬ್ಬರ: ಕುಸಿದ ಮನೆ, ಪ್ರಾಣಾಪಾಯದಿಂದ ಪಾರಾದ 6 ಜನ - Heavy Rain

ABOUT THE AUTHOR

...view details