ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬೆಂಗಳೂರು: "ಪಿಎಸ್ಐ ಮರು ಪರೀಕ್ಷೆ ಸುಗಮವಾಗಿ ನಡೆದಿದ್ದು, ಆದಷ್ಟು ಬೇಗ ಮೌಲ್ಯಮಾಪನ ಮುಗಿಸಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು" ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು. ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಯಾವುದೇ ರೀತಿಯ ಘಟನೆ ನಡೆದಿಲ್ಲ. ಬ್ಲೂಟೂತ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ತರಲು ಸಾಧ್ಯವಾಗಿಲ್ಲ. ಇದಕ್ಕೆ ಯಾರೂ ಸಹ ಪ್ರಯತ್ನಿಸಿಲ್ಲ ಎಂದು ಭಾವಿಸಿದ್ದೇನೆ. 54 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಬೇಕಿತ್ತು. ಕೆಲವರು ಗೈರಾಗಿದ್ದಾರೆ" ಎಂದರು.
ಭರ್ಜರಿ ನೇಮಕಾತಿ: "ಈ ಪರೀಕ್ಷೆಯನ್ನು ಕೆಇಎ ಅವರು ಯಾವುದೇ ರೀತಿಯ ಗೊಂದಲಗಳಾಗದಂತೆ ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದಾರೆ. ಇದಕ್ಕಾಗಿ ಕೆಇಎ ನಿರ್ದೇಶಕರು ರಮ್ಯಾ ಹಾಗೂ ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮುಂದಿನ ನೇಮಕಾತಿಗಳಲ್ಲಿಯೂ ಇದೇ ರೀತಿ ಪರೀಕ್ಷೆ ನಡೆಸಿಕೊಡಲಿ. ಮುಂದಿನ ಹಂತದಲ್ಲಿ 403 ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯಬೇಕು. ಆ ನೇಮಕಾತಿ ಪರೀಕ್ಷೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರಿಗೆ ವಹಿಸುವ ಬಗ್ಗೆ ಚಿಂತನೆ ಇದೆ. ನೋಟಿಫಿಕೇಷನ್ ಆಗಿ, ಫಿಸಿಕಲ್ ಟೆಸ್ಟ್ ಸಹ ಮುಗಿದಿದೆ. ಪರೀಕ್ಷೆ ಬಾಕಿ ಇದೆ. ಈ ಎರಡು ನೇಮಕಾತಿ ಪ್ರಕ್ರಿಯೆ ಮುಗಿದರೆ ಇಲಾಖೆಗೆ ಒಟ್ಟು 948 ಪಿಎಸ್ಐ ಸಿಗುತ್ತಾರೆ" ಎಂದು ಹೇಳಿದರು.
"ಈ ಎರಡು ನೇಮಕಾತಿ ಪ್ರಕ್ರಿಯೆ ಮುಗಿದ ನಂತರ 660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ನೋಟಿಫಿಕೇಷನ್ ಹೊರಡಿಸಲಾಗುವುದು. ಈಗಾಗಲೇ ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದ್ದು, ಹಂತ ಹಂತವಾಗಿ ನೇಮಕಾತಿ ಮಾಡಿಕೊಳ್ಳಲಾಗುವುದು. ಮುಂದಿನ ಎರಡು ವರ್ಷದೊಳಗೆ ಈ ಎಲ್ಲ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಗಿಸಲಾಗುವುದು" ಎಂದು ತಿಳಿಸಿದರು.
ತನಿಖೆ ಬಳಿಕ ಸುಮ್ಮನಾಗುತ್ತಾರೆ: "ಕಲಬುರಗಿಯಲ್ಲಿ ಅಂಬೇಡ್ಕರ್ ಪುತ್ಥಳಿಗೆ ಅಪಮಾನ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಕೃತ್ಯದ ಉದ್ದೇಶ ಏನು ಎಂಬುದು ತನಿಖೆಯಿಂದ ಹೊರ ಬರಬೇಕಿದೆ. ಈ ರೀತಿಯ ಘಟನೆ ನಡೆದಾಗ ಯಾವುದಾದರೂ ಉದ್ದೇಶ ಇದ್ದೇ ಇರುತ್ತದೆ. ಅವರ ಉದ್ದೇಶ ಏನಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕು. ಯಾರಾದ್ದಾದರೂ ಕುಮ್ಮಕ್ಕು ಇದೆಯಾ ಎಂಬುದು ಗೊತ್ತಾಗಲಿದೆ" ಎಂದರು.
ಬಿಜೆಪಿಯವರು ಪ್ರತಿಭಟನೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಸಚಿವರು, "ಪ್ರಕರಣದ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬೀಳಲಿದೆ. ಯಾರು ಮಾಡಿದ್ದಾರೆ ಎಂಬುದು ಗೊತ್ತಾದ ಮೇಲೆ ತಾವೇ ಸುಮ್ಮನಾಗುತ್ತಾರೆ. ನಾನು ಈಗಲೇ ಊಹಾತ್ಮಕವಾಗಿ ಯಾರು ಮಾಡಿದ್ದಾರೆ, ಯಾಕೆ ಮಾಡಿದ್ದಾರೆ ಎಂದು ಹೇಳುವುದಿಲ್ಲ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಎಲ್ಲವನ್ನೂ ಪರಿಶೀಲನೆ ನಡೆಸಲಾಗುವುದು. ಸಾರ್ವಜನಿಕವಾಗಿ ಯಾರು ಎಂದು ಹೇಳುವುದಕ್ಕೆ ಬರುವುದಿಲ್ಲ. ಸಾಕ್ಷ್ಯಾಧಾರಗಳ ಸಮೇತ ಉತ್ತರಿಸಲಾಗುವುದು" ಎಂದು ಹೇಳಿದರು.
ಹೆಚ್ಚು ಸೀಟು ಗೆಲ್ಲುತ್ತೇವೆ: ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲದೇ ಇದ್ದರೆ ನಮಗೆ ಅಧಿಕಾರದಲ್ಲಿ ಮುಂದುವರೆಯಲು ನೈತಿಕತೆ ಇರುತ್ತಾ ಎಂಬ ಸಚಿವ ರಾಜಣ್ಣ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, "ಲೋಕಸಭೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಈ ಹಿಂದೆ 27 ಸೀಟ್ ಗೆದ್ದಿದ್ದನ್ನು ಸ್ಮರಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ವಾತಾವರಣ ಇದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಂದ ಒಳ್ಳೆ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಎಂಟು ತಿಂಗಳಲ್ಲಿ ಜನಪರ ಆಡಳಿತ ನೀಡಿರುವುದರಿಂದ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಪಿಎಸ್ಐ ನೇಮಕಾತಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ: ಪೊಲೀಸ್ ಆಯುಕ್ತ ದಯಾನಂದ್