ಕರ್ನಾಟಕ

karnataka

ETV Bharat / state

ಲಕ್ಕಿಡಿಪ್​ ಘೋಷಿಸಿ ಡ್ರಾ ಮಾಡದೆ ವಂಚನೆ ಆರೋಪ: ಪ್ರತಿಷ್ಟಿತ ಮಳಿಗೆಗೆ ₹1 ಲಕ್ಷ ದಂಡ, ಗ್ರಾಹಕನಿಗೆ ₹30 ಸಾವಿರ ಪರಿಹಾರ - CONSUMER COURT

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಗ್ರಾಹಕರನ್ನು ಸೆಳೆಯಲು ಲಕ್ಕಿಡಿಪ್​ ಘೋಷಿಸಿ ಬಳಿಕ ವಂಚಿಸಿದ ಆರೋಪದ ಮೇಲೆ ಪ್ರತಿಷ್ಟಿತ ಮಳಿಗೆಗೆ 1 ಲಕ್ಷ ರೂ ದಂಡ ವಿಧಿಸಿ ಗ್ರಾಹಕರ ಪರಿಹಾರ ವೇದಿಕೆ ಆದೇಶಿಸಿದೆ.

consumer court fine to Bengaluru pothys for not draw the lucky dip coupon
ಗ್ರಾಹಕರ ಪರಿಹಾರ ವೇದಿಕೆ (ETV Bharat)

By ETV Bharat Karnataka Team

Published : Dec 9, 2024, 7:59 PM IST

ಬೆಂಗಳೂರು:ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಾಹಕರನ್ನು ಸೆಳೆಯಲು ಲಕ್ಕಿಡಿಪ್ ಘೋಷಣೆ ಮಾಡಿ ಅದನ್ನು ಡ್ರಾ ಮಾಡದೆ ವಂಚಿಸಿದ ಆರೋಪ ಪ್ರಕರಣದಲ್ಲಿ ಬೆಂಗಳೂರು ನಗರದ ಪ್ರತಿಷ್ಟಿತ ಪೊತೀಸ್ ಮಳಿಗೆಗೆ 1 ಲಕ್ಷ ರೂ ದಂಡ ಹಾಗೂ ದೂರುದಾರನಿಗೆ 30 ಸಾವಿರ ರೂ ಪರಿಹಾರ ನೀಡುವಂತೆ ನಗರದ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಆದೇಶಿಸಿದೆ.

ಪೊತೀಸ್ ಮಳಿಗೆ ವಿರುದ್ಧ ಹೆಚ್.ಕೆ.ಶ್ರೀನಿವಾಸ್ ಎಂಬುವರು ದಾಖಲಿಸಿದ್ದ ದೂರಿನ ವಿಚಾರಣೆ ನಡೆಸಿರುವ ವೇದಿಕೆ ಅಧ್ಯಕ್ಷರಾದ ಎಂ.ಶೋಭಾ, ಸದಸ್ಯರಾದ ಅನಿತಾ ಶಿವಕುಮಾರ್, ಸುಮಾ ಅನಿಲ್ ಕುಮಾರ್ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.

ದಂಡದ ಮೊತ್ತ 1 ಲಕ್ಷ ರೂ ಹಣವನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪಾವತಿಸುವಂತೆ ಸೂಚಿಸಿದೆ. ಜೊತೆಗೆ ದೂರುದಾರರು ಖರೀದಿಸಿರುವ ಒಟ್ಟು ಮೊತ್ತದ ಜೊತೆಗೆ ಮಾನಸಿಕ ಹಿಂಸೆ ಅನುಭವಿಸಿದ್ದಾಗಿ 25 ಸಾವಿರ ರೂ. ಮತ್ತು ಕಾನೂನು ಹೋರಾಟಕ್ಕೆ ಪರಿಹಾರವಾಗಿ 5 ಸಾವಿರ ರೂ.ಸೇರಿ ಒಟ್ಟು 30 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.

ದೂರುದಾರರು 18 ಕೂಪನ್‌ಗಳನ್ನು ಹೊಂದಿದ್ದು, ಪರಿಹಾರವನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಎಲ್ಲ ಕೂಪನ್‌ಗಳಿಗೆ 1,782 ರೂ ಪಾವತಿಸಿದ್ದು, ಪೊತೀಸ್ ಅಷ್ಟೂ ಮೊತ್ತವನ್ನು ಹಿಂದಿರುಗಿಸುವ ಜವಾಬ್ದಾರಿ ಹೊಂದಿದೆ. ಜೊತೆಗೆ, ಪರಿಹಾರವಾಗಿ ಮಾನಸಿಕ ಹಿಂಸೆ ಅನುಭವಿಸಿದ್ದಕ್ಕಾಗಿ 25 ಸಾವಿರ ಮತ್ತು ಕಾನೂನು ಹೋರಾಟಕ್ಕಾಗಿ 5 ಸಾವಿರ ರೂ.ಗಳ ಪಾವತಿ ಮಾಡಬೇಕು ಎಂದು ಪೀಠ ಆದೇಶಿಸಿದೆ.

ಪೊತೀಸ್ ಮಳಿಗೆಯವರು ಆದೇಶದ ಪ್ರತಿ ಸಿಕ್ಕ 30 ದಿನಗಳಲ್ಲಿ ಗ್ರಾಹಕರ ಕಲ್ಯಾಣ ನಿಧಿಗೆ 1 ಲಕ್ಷ ರೂ. ಪಾವತಿ ಮಾಡಬೇಕು. ಇಲ್ಲವಾದಲ್ಲಿ ವಾರ್ಷಿಕ ಶೇ.10 ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ ಎಂದು ಪೀಠ ತಿಳಿಸಿದೆ. ಪ್ರಕರಣ ಸಂಬಂಧ ನೋಟಿಸ್ ಜಾರಿ ಮಾಡಿದರೂ ಪ್ರತಿವಾದಿಯಾಗಿರುವ ಪೊತೀಸ್, ಆಯೋಗದ ಮುಂದೆ ಹಾಜರಾಗಿಲ್ಲ.

ಪ್ರಕರಣದ ಹಿನ್ನೆಲೆ:ಪೊತೀಸ್​​ನಲ್ಲಿ 2023ರ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಘೋಷಣೆ ಮಾಡಿದ್ದ ಲಕ್ಕಿ ಡಿಪ್‌ನ ಪರಿಣಾಮವಾಗಿ ಪರಿಚಯಿಸಿದ್ದ, ಗ್ರಾಹಕರಿಗೆ 99 ರೂ.ಗಿಂತಲೂ ಹೆಚ್ಚಿನ ಮೊತ್ತದ ಖರೀದಿಸಿದವರಿಗೆ ಲಕ್ಕಿ ಡಿಪ್​​ನಲ್ಲಿ ಭಾಗವಹಿಸುವ ಕೂಪನ್‌ನ್ನು ವಿತರಣೆ ಮಾಡಲಾಗಿತ್ತು. ವಿಜೇತರಿಗೆ 5 ಲಕ್ಷ ರೂ. ಮೌಲ್ಯದ ದ್ವಿಚಕ್ರ ವಾಹನ ಸೇರಿದಂತೆ ಮತ್ತಿತರ ಉಡುಗೊರೆ ನೀಡುವುದಾಗಿ ತಿಳಿಸಿತ್ತು. ಈ ಸಂಬಂಧ ಪೊತೀಸ್ ಮಳಿಗೆಯ ಮುಂದೆ ಜಾಹೀರಾತು ಪ್ರಕಟಣೆ ಮಾಡಲಾಗುತ್ತಿತ್ತು.

ಈ ಜಾಹೀರಾತು 2024ರ ಜನವರಿ 18ಕ್ಕೆ ಅಂತ್ಯಗೊಳ್ಳಲಿದ್ದು, 19ಕ್ಕೆ ಲಕ್ಕಿ ಡಿಪ್ ಡ್ರಾ ಮಾಡುವುದಾಗಿ ತಿಳಿಸಲಾಗಿತ್ತು. ಈ ಪ್ರಕಟಣೆಯಿಂದ ಪ್ರೇರಿತರಾಗಿದ್ದ ದೂರುದಾರ ಹೆಚ್.ಕೆ.ಶ್ರೀನಿವಾಸ್ ಹಲವು ವಸ್ತುಗಳನ್ನು ಖರೀದಿಸಿ ಲಕ್ಕಿ ಡ್ರಾ ಕೂಪನ್‌ ಮಳಿಗೆಯಲ್ಲಿನ ಬ್ಲಾಗ್‌ನಲ್ಲಿ ಹಾಕಿದ್ದರು.

ಬಳಿಕ ಪೊತೀಸ್, 2024ರ ಏಪ್ರಿಲ್ 10ರವರೆಗೂ ಖರೀದಿ ದಿನಾಂಕ ವಿಸ್ತರಿಸಿ ಡ್ರಾ ದಿನಾಂಕವನ್ನು ಏಪ್ರಿಲ್ 11ಕ್ಕೆ ಮಾಡುವುದಾಗಿ ಪರಿಷ್ಕೃತ ಜಾಹೀರಾತು ಪ್ರಕಟಿಸಲಾಗಿತ್ತು. ಇದರಿಂದ ದೂರುದಾರ ಮತ್ತಷ್ಟು ವ್ಯಾಪಾರ ಮಾಡಿ ಕೂಪನ್​ಗಳನ್ನು ಪಡೆದಿದ್ದರು. ಆದರೆ, ಏಪ್ರಿಲ್ 11 ಮುಗಿದರೂ, ಯಾವುದೇ ರೀತಿಯ ಡ್ರಾ ಮಾಡಿರಲಿಲ್ಲ. ಇದನ್ನು ದೂರುದಾರರು ಪ್ರಶ್ನಿಸಿದರೆ ಮಳಿಗೆ ಸಿಬ್ಬಂದಿಯು ವ್ಯವಸ್ಥಾಪಕರು ತಮಿಳುನಾಡಿನಲ್ಲಿದ್ದು ಮತ್ತೊಂದು ಮಳಿಗೆ ಪ್ರಾರಂಭದ ಕಾರ್ಯದಲ್ಲಿದ್ದಾರೆ ಎಂದು ಹೇಳುವ ಮೂಲಕ ನುಣುಚಿಕೊಳ್ಳಲು ಮುಂದಾಗಿದ್ದರು‌ ಎಂದು‌ ಅರ್ಜಿಯಲ್ಲಿ ಆರೋಪಿಸಿದ್ದರು.

ಇದರಿಂದಾಗಿ ಪೊತೀಸ್​ಗೆ ಶ್ರೀನಿವಾಸ್ ಅವರು ಲೀಗಲ್ ನೋಟಿಸ್ ಜಾರಿ ಮಾಡಿದ್ದರು. ಆದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ನೀಡಿದ ಲಕ್ಕಿ ಡ್ರಾ ಭರವಸೆಯನ್ನು ಉಲ್ಲಂಘನೆ ಮಾಡಿದ ಆರೋಪ ಸಂಬಂಧ ಕ್ರಮ ಕೈಗೊಳ್ಳುವಂತೆ ಕೋರಿ ಗ್ರಾಹಕರ ಪರಿಹಾರವೇದಿಕೆಗೆ ದೂರು ದಾಖಲಿಸಿದ್ದರು. ಅಲ್ಲದೆ, ಲಕ್ಕಿ ಡ್ರಾ ಜಾಹೀರಾತು ನೋಡಿ ಸುಮಾರು 18 ಕೂಪನ್‌ಗಳನ್ನು ಖರೀದಿ ಮಾಡಿದ್ದೇನೆ. ಹೀಗಾಗಿ ದ್ವಿಚಕ್ರವಾಹನ, ಟಿವಿ ಇಲ್ಲವೇ 2 ಲಕ್ಷ ಮೌಲ್ಯದ ಬಹುಮಾನ ವಿತರಣೆ ಮಾಡುವಂತೆ ಪೊತೀಸ್​​ಗೆ ನಿರ್ದೇಶನ ನೀಡಬೇಕು ಎಂದು ದೂರಿನಲ್ಲಿ ಕೋರಿದ್ದರು.

ದೂರಿಗೆ ಸಂಬಂಧಿಸಿದಂತೆ ಪೊತೀಸ್‌ಗೆ ನೋಟಿಸ್ ಜಾರಿ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದ್ದರಿಂದ ಪೀಠ ಏಕ ಪಕ್ಷೀಯವಾಗಿ ಆದೇಶ ನೀಡಿದೆ.

ಇದನ್ನೂ ಓದಿ: ಎರಡು ದಿನಗಳಲ್ಲಿ ಗಡಿ ಕನ್ನಡ ಶಾಲೆಗಳಿಗೆ ಭೇಟಿ ನೀಡುವೆ: ಮಧು ಬಂಗಾರಪ್ಪ

ABOUT THE AUTHOR

...view details