ದಾವಣಗೆರೆ:ನಿಯಂತ್ರಣ ಕಳೆದುಕೊಂಡ ಕಾರೊಂದು ಮರಕ್ಕೆ ಗುದ್ದಿದ ಪರಿಣಾಮ ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನ್ಯಾಮತಿಯ ದಾನಿಹಳ್ಳಿ ಸಮೀಪ ಇಂದು ನಡೆದಿದೆ. ಸಿದ್ದೇಶ್ (34) ಮೃತರು.
ದಾವಣಗೆರೆ ಡಿಎಆರ್ನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಸಿದ್ದೇಶ್ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಬಂಧಿಕರೊಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮರಳಿ ಊರಿಗೆ ಕರೆದುಕೊಂಡು ಬರಲು ತೆರಳದಿದ್ದರು. ಈ ಸಂದರ್ಭದಲ್ಲಿ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದ ಸಿದ್ದೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ವಿಷಯ ತಿಳಿದು ಘಟನಾ ಸ್ಥಳಕ್ಕೆ ನ್ಯಾಮತಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನೆಗೆ ಅಧಾರವಾಗಿದ್ದ ಸಿದ್ದೇಶ್ರನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸ್ ಇಲಾಖೆ ಮತ್ತು ಎಸ್ಪಿ ಉಮಾ ಪ್ರಶಾಂತ್ ಸಂತಾಪ ಸೂಚಿಸಿದ್ದಾರೆ.
ಇತ್ತೀಚಿನ ಘಟನೆಗಳು-ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ:ಕಳೆದ ನಾಲ್ಕು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಏರ್ಪೋರ್ಟ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದರು. ಹುಬ್ಬಳ್ಳಿ ಮೂಲದ ಕಾಜೋಲ್ ಶಿಯಾನಿ ಮೃತರೆಂದು ಗುರುತಿಸಲಾಗಿದೆ. ನಾಲ್ವರು ಸಹ ಪ್ರಯಾಣಿಕರು ಗಾಯಗೊಂಡಿದ್ದರು. ಐವರು ಏರ್ಪೋರ್ಟ್ ಉದ್ಯೋಗಿಗಳು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾಜೋಲ್ ಶಿಯಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ:ಕಬ್ಬು ತುಂಬಿಕೊಂಡು ನಿಂತಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ತುಂಬರಮಟ್ಟಿ ಕ್ರಾಸ್ ಬಳಿ ಕಳೆದ ತಿಂಗಳು ನಡೆದಿತ್ತು. ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಿಗ್ಗೆ 4 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಮೃತರನ್ನು ಮಲ್ಲು ಪೂಜಾರಿ, ಕಲ್ಲಪ್ಪ ಕೌಟಗಿ, ಕಾಮಾಕ್ಷಿ ಬಡಿಗೇರ, ತುಕಾರಾಮ್ ತಳೇವಾಡ ಎಂದು ಗುರುತಿಸಲಾಗಿದೆ. ಬಾದಾಮಿಯಿಂದ ಹೊನಗನಹಳ್ಳಿಯ ತಮ್ಮ ಊರಿಗೆ ಹಿಂತಿರುಗಿದ್ದಾಗ ದುರ್ಘಟನೆ ನಡೆದಿತ್ತು.
ಇದನ್ನೂ ಓದಿ:ಚಿತ್ರದುರ್ಗ: ಟ್ಯಾಂಕರ್ ಲಾರಿಗೆ ಕಾರು ಡಿಕ್ಕಿ, ಇಬ್ಬರು ಮಹಿಳೆಯರು ಸಾವು