ಕಲಬುರಗಿ:ಇಲ್ಲಿನ ಮಹಾನಗರ ಪಾಲಿಕೆಯ 22ನೇ ಮೇಯರ್ ಆಗಿ ಕಾಂಗ್ರೆಸ್ ಸದಸ್ಯ ಯಲ್ಲಪ್ಪ ನಾಯ್ಕೋಡಿ ಆಯ್ಕೆಯಾದರೆ, ಹೀನಾಬೇಗಂ ಅಬ್ದುಲ್ ರಹೀಂ ಅವರು ಉಪಮೇಯರ್ ಆಗಿ ಆಯ್ಕೆಗೊಂಡರು. ಈ ಮೂಲಕ ಬಿಜೆಪಿಯ ಐದು ವರ್ಷಗಳ ಆಡಳಿತ ಕೊನೆಗೊಂಡಿದೆ.
ಮೇಯರ್-ಉಪ ಮೇಯರ್ ಇಬ್ಬರೂ ಅವಿರೋಧವಾಗಿ ಆಯ್ಕೆಯಾದರು. ನೂತನ ಮೇಯರ್ ಯಲ್ಲಪ್ಪ ನಾಯ್ಕೋಡಿ ಪಾಲಿಕೆಯ ವಾರ್ಡ್ ಸಂಖ್ಯೆ 53ರ ಸದಸ್ಯರಾಗಿದ್ದು, ಉಪಮೇಯರ್ ಹೀನಾಬೇಗಂ ವಾರ್ಡ್ ಸಂಖ್ಯೆ 10ರ ಸದಸ್ಯೆ.
ಮೇಯರ್ ಸ್ಥಾನ ಪರಿಶಿಷ್ಟ ಪಂಗಡ, ಉಪ ಮೇಯರ್ ಸ್ಥಾನ ಬಿಸಿಎ ಪ್ರವರ್ಗಕ್ಕೆ ಮೀಸಲಾಗಿತ್ತು. ಒಟ್ಟು 55 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌ನ 27 ಸದಸ್ಯರು ಜೊತೆಗೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರುಗಳಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ವಿಧಾನ ಪರಿತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಚಂದ್ರಶೇಖರ ಪಾಟೀಲ್ ಅವರನ್ನೊಳಗೊಂಡಂತೆ ಸದಸ್ಯ ಬಲ 33ಕ್ಕೆ ಏರಿಕೆಯಾಗಿದೆ.
22 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಶಾಸಕ ಬಸವರಾಜ ಮತ್ತಿಮೂಡ, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಬಿ.ಜಿ.ಪಾಟೀಲ್ ಹಾಗೂ ಜೆಡಿಎಸ್ ಪಕ್ಷದ ನಾಲ್ವರು ಸದಸ್ಯರ ಬೆಂಬಲವಿದ್ದರೂ 30 ಮತಗಳನ್ನು ಕ್ರೂಢೀಕರಿಸಲು ಸಾಧ್ಯವಾಗಿದೆ.
ಈ ನಡುವೆ ಮೇಯರ್ ಸ್ಥಾನದ ಪ್ರತಿಸ್ಪರ್ಧಿ ವಾರ್ಡ್ ಸಂಖ್ಯೆ 23ರ ಬಿಜೆಪಿ ಸದಸ್ಯ ದಿಗಂಬರ ನಾಡಗೌಡ ಅವರ ಪರಿಶಿಷ್ಟ ಪಂಗಡ (ತಳವಾರ) ಜಾತಿ ಪ್ರಮಾಣಪತ್ರವನ್ನು ಅಸಿಂಧು ಎಂದು ಪ್ರಾದೇಶಿಕ ಆಯುಕ್ತ ಕೃಷ್ಣಾ ಬಾಜಪೇಯಿ ಘೋಷಿಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ನಾಯ್ಕೋಡಿ ಅವಿರೋಧ ಆಯ್ಕೆಯಾದರು. ದಿಗಂಬರ ಅವರ ಬಳಿ ತಳವಾರ ಸಮುದಾಯಕ್ಕೆ ಸೇರಿದ ಎಸ್ಟಿ ಜಾತಿ ಪ್ರಮಾಣಪತ್ರ ಇತ್ತು. ಆದರೆ, ಅವರು ಹಿಂದುಳಿದ ಕಬ್ಬಲಿಗ ಸಮುದಾಯಕ್ಕೆ ಸೇರಿದ್ದಾರೆ. ಹಾಗಾಗಿ, ಪ್ರಮಾಣಪತ್ರ ಅಸಿಂಧುಗೊಳಿಸುವಂತೆ ಕಾಂಗ್ರೆಸ್ ನಾಯಕರು ಮನವಿ ಸಲ್ಲಿಸಿದ್ದರು.
ಇನ್ನು, ಹೀನಾಬೇಗಂ ಅವರ ಪತಿ ಅಬ್ದುಲ್ ರಹೀಂ ಮೂಲತಃ ಎಸ್‌ಡಿಪಿಐ ಕಾರ್ಯಕರ್ತರಾಗಿದ್ದು, 2013ರಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಪಾಲಿಕೆಗೆ ಆಯ್ಕೆಗೊಂಡಿದ್ದರು. ನಂತರ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
"ಮಹಾನಗರದ ಜನತೆ ಪಾಲಿಕೆ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಆದರೆ, ಜನರ ನಿರೀಕ್ಷೆಯಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಿ ಮತ್ತೊಮ್ಮೆ ಅವರ ವಿಶ್ವಾಸ ಗಳಿಸುತ್ತೇವೆ" ಎಂದು ನೂತನ ಮೇಯರ್ ಯಲ್ಲಪ್ಪ ನಾಯ್ಕೋಡಿ ಹೇಳಿದರು.
"ನಗರದಲ್ಲಿ ಹಲವು ಕೆಲಸಗಳು ಬಾಕಿ ಉಳಿದಿವೆ. ಈ ಕೆಲಸಗಳನ್ನು ಶೀಘ್ರವೇ ಕೈಗೊಳ್ಳುವುದರ ಜೊತೆಗೆ ನಗರದಲ್ಲಿ ನೀರು, ರಸ್ತೆ, ಚರಂಡಿ, ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನ ಹರಿಸಿ ಜನರ ವಿಶ್ವಾಸ ಗಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕರ ವಸೂಲಿಯಲ್ಲಿ ಪಾಲಿಕೆ ಹಿನ್ನಡೆ ಅನುಭವಿಸುತ್ತಿದೆ. ಅದನ್ನು ಸರಿಪಡಿಸಿ ಪಾಲಿಕೆಯ ಎಲ್ಲಾ ಸದಸ್ಯರನ್ನೂ ಒಗ್ಗೂಡಿಸಿಕೊಂಡು ನಗರವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗುತ್ತೇನೆ" ಎಂದು ಅವರು ಭರವಸೆ ನೀಡಿದರು.
ಇದನ್ನೂ ಓದಿ:ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ಚುನಾವಣೆ: ರಾಮಪ್ಪ ಬಡಿಗೇರ ಮೇಯರ್, ದುರ್ಗಮ್ಮ ಉಪ ಮೇಯರ್ - Hubli Dharwad Corporation Election