ಬೆಳಗಾವಿ:''ಕರ್ನಾಟಕದಲ್ಲಿ ಕಾಂಗ್ರೆಸ್ನಿಂದ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ. ಕೋಮುಗಲಭೆ, ಬಾಂಬ್ ಸ್ಫೋಟದಂತಹ ಪ್ರಕರಣಗಳು ಹೆಚ್ಚುತ್ತಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಇರುವ ಎಲ್ಲ ಕಡೆಯೂ ಕಾನೂನು ಸಮಸ್ಯೆ ಎದುರಾಗಿದ್ದು, ರಾಜ್ಯದಲ್ಲಿ ಪರಿಸ್ಥಿತಿ ಚಿಂತಾಜನಕವಾಗಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದರು.
ಬೆಳಗಾವಿ ನಗರದ ಮಾಲಿನಿಸಿಟಿ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ''ಬೆಳಗಾವಿಯಲ್ಲಿ ಮಹಿಳೆಯ ಮೇಲೆ ದಾಳಿ ನಡೆಸಲಾಯಿತು. ಚಿಕ್ಕೋಡಿಯಲ್ಲಿ ಜೈನಮುನಿ ಹತ್ಯೆಯಾಗಿದೆ. ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣ ನಡೆದಿದೆ. ಬೆಂಗಳೂರಿನಲ್ಲಿ ಕೆಫೆ ಬಾಂಬ್ ಸ್ಫೋಟ ಪ್ರಕರಣ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ'' ಎಂದು ಆತಂಕ ವ್ಯಕ್ತಪಡಿಸಿದರು.
ಭಾಷಣ ಆರಂಭಕ್ಕೂ ಮುನ್ನ ಬೆಳಗಾವಿ ಮತ್ತು ಚಿಕ್ಕೋಡಿ ಜನತೆಗೆ ನಮಸ್ಕಾರ ಸಲ್ಲಿಸಿ, ತಾಯಿ ಭುವನೇಶ್ವರಿ, ಸವದತ್ತಿ ಯಲ್ಲಮ್ಮದೇವಿಗೆ ವಂದಿಸಿದರು. ''ರಾಹುಲ್ ಮತ್ತು ಪ್ರಿಯಾಂಕಾ ಇಡೀ ದೇಶ ಸುತ್ತಿ ನಿಮ್ಮ ಪಿತ್ರಾರ್ಜಿತ ಆಸ್ತಿ ಸರ್ವೆ ಮಾಡಿ, ಕಬ್ಜಾ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ನೀವು ಬಚ್ಚಿಟ್ಟಿದ್ದ ಸಂಪತ್ತನ್ನು ಕೊಳ್ಳೆ ಹೊಡೆಯಲು ಕಾಂಗ್ರೆಸ್ ಸಂಚು ರೂಪಿಸಿದೆ. ನಿಮ್ಮ ಮಾಂಗಲ್ಯಕ್ಕೆ ಕೈಹಾಕಲು ಬಿಡುತ್ತಿರಾ? ನಾನು ಕಾಂಗ್ರೆಸ್ ನವರಿಗೆ ಎಚ್ಚರಿಕೆ ಕೊಡುತ್ತೇನೆ. ಈ ಆಸೆಯನ್ನು ಬಿಟ್ಟು ಬಿಡಿ. ಮೋದಿ ಬದುಕಿರುವವರೆಗೂ ಇದು ಸಾಧ್ಯವಿಲ್ಲ'' ಎಂದು ಗುಡುಗಿದರು.
ಕಾಂಗ್ರೆಸ್ ರಾಷ್ಟ್ರ ತಲೆ ತಗ್ಗಿಸುವಂತೆ ಮಾಡುತ್ತಿದೆ- ಮೋದಿ:''ಶಿವಾಜಿ ಪ್ರಜೆಗಳಿಗಾಗಿ ಸಂಘರ್ಷ ಮಾಡಿದವರು, ಬಸವೇಶ್ವರರು ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಮಹತ್ವ ಸಾರಿದವರು. ಭಾರತ ಪ್ರಜಾಪ್ರಭುತ್ವದ ತಾಯಿಯಾಗಿದೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಗೆ ಬಂದಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಮೇಲೆ ವಿಶ್ವಾಸ ಹೆಚ್ಚಾಗಿದೆ. ಬಡವರ ಕಲ್ಯಾಣಕ್ಕಾಗಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರಬೇಕು. ಭಾರತ ಇನ್ನಷ್ಟು ಬಲಾಢ್ಯವಾಗಲಿದೆ. ಆಗ ಭಾರತೀಯರು ಖುಷಿಯಾಗುತ್ತಾರೆ'' ಎಂದ ಪ್ರಧಾನಿ ಮೋದಿ, ''ಕೊರೊನಾ ಸಂದರ್ಭದಲ್ಲಿ ಕೊರೊನಾ ವ್ಯಾಕ್ಸಿನ್ಗೂ ಕಾಂಗ್ರೆಸ್ ವಿರೋಧಿಸಿತ್ತು. ಇದು ಬಿಜೆಪಿ ವ್ಯಾಕ್ಸಿನ್ ಎಂದರು. ಇವಿಎಂಗೂ ವಿರೋಧಿಸಿದರು. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನವಾಗಿದೆ. ದೇಶಕ್ಕೆ ಅವಮಾನವಾಗುವ ರೀತಿಯಲ್ಲಿ ಮಾತನ್ನಾಡುವ ಮೂಲಕ ಕಾಂಗ್ರೆಸ್ ರಾಷ್ಟ್ರ ತಲೆತಗ್ಗಿಸುವಂತೆ ಮಾಡುತ್ತಿದೆ. ಇವಿಎಂ ಬಗ್ಗೆ ಸುಳ್ಳು ಹೇಳುವ ಮೂಲಕ ಲೋಕತಂತ್ರವನ್ನು ಬರ್ಬಾದ್ ಮಾಡಲು ಮುಂದಾಗಿದೆ'' ಎಂದು ಆರೋಪಿಸಿದರು.