ಬೆಂಗಳೂರು:ಬಿಜೆಪಿ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ಇಂದಿನಿಂದ ಬಿಜೆಪಿ ನಾಯಕರ ನೈತಿಕತೆ ಪ್ರಶ್ನಿಸುವ ಸಭೆ ನಡೆಸಿ ಕೌಂಟರ್ ಕೊಡಲು ನಿರ್ಧರಿಸಿದೆ. ನೈತಿಕ ಪ್ರಶ್ನೆ ಸಭೆಯಲ್ಲಿ ಬಿಜೆಪಿ ಕಾಲದ ಅಕ್ರಮ, ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ, ಸಂವಿಧಾನ ಸಂಸ್ಥೆಗಳ ದುರ್ಬಳಕೆ ಬಗ್ಗೆ ಬಿಜೆಪಿಗರನ್ನು ಪ್ರಶ್ನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸದಾಶಿವನಗರ ನಿವಾಸದಲ್ಲಿ ಗುರುವಾರ ರಾತ್ರಿ ತುರ್ತು ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಶುಕ್ರವಾರ ಬಿಡದಿಯಲ್ಲಿ ಬೆಳಗ್ಗೆ 11 ಗಂಟೆಗೆ ನೈತಿಕ ಪ್ರಶ್ನೆ ಸಭೆ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ಆಗಿರುವ ಹಗರಣ, ಅನ್ಯಾಯಗಳ ಬಗ್ಗೆ ಪ್ರಶ್ನೆ ಮಾಡಿ ಜನರಿಗೆ ತಿಳಿಸುತ್ತೇವೆ. ನಮ್ಮ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ನೀಡಬೇಕು. ಬಿಜೆಪಿ ನಾಯಕರು ಎಲ್ಲೆಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೋ ಅಲ್ಲಿ ಒಂದೊಂದು ದಿನ ಮುಂಚಿತವಾಗಿ ಈ ಕಾರ್ಯಕ್ರಮ ಮಾಡುತ್ತೇವೆ. ಆಗಸ್ಟ್ 2ರಂದು ಬಿಡದಿ, 3ರಂದು ರಾಮನಗರ, 4ರಂದು ಚನ್ನಪಟ್ಟಣ, 5ರಂದು ಮದ್ದೂರು, 6ರಂದು ಮಂಡ್ಯ, 9ರಂದು ಮೈಸೂರಿನಲ್ಲಿ ಈ ಕಾರ್ಯಕ್ರಮ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಇದೇ ವೇಳೆ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯಾವ ರೀತಿ ಪ್ರಯತ್ನ ಮಾಡುತ್ತಿದೆ ಎಂದು ಜನರಿಗೆ ತಿಳಿಸುತ್ತೇವೆ. ಪ್ರತಿನಿತ್ಯ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಶಾಸಕರು ಹಾಗೂ ಕಾರ್ಯಕರ್ತರು ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ. ನಾವು ಪಾದಯಾತ್ರೆ ಮಾಡುವುದಿಲ್ಲ. ಸತ್ಯ ಹರಿಶ್ಚಂದ್ರರಂತೆ ಪಾದಯಾತ್ರೆ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಅವರ ಕಾಲದಲ್ಲಿನ ಅಕ್ರಮಗಳ ಬಗ್ಗೆ, ರಾಜ್ಯಕ್ಕೆ ಮಾಡಿರುವ ಅನ್ಯಾಯ, ಸಾಂವಿಧಾನಿಕ ಸಂಸ್ಥೆಗಳ ದುರ್ಬಳಕೆ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಅಧಿಕಾರಾವಧಿಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ನಮ್ಮ ಬಳಿಯೂ ದಾಖಲೆಗಳಿವೆ. ದಾಖಲೆ ಸಮೇತ ನಾವು ಪ್ರಶ್ನೆ ಮಾಡುತ್ತೇವೆ ಎಂದು ತಿಳಿಸಿದರು.