ಕರ್ನಾಟಕ

karnataka

ETV Bharat / state

ಧಾರವಾಡ ಲೋಕ ಸಮರ: ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ರಣತಂತ್ರ - Lok Sabha election

ಬಿಜೆಪಿ ಭದ್ರಕೋಟೆಯಾಗಿರುವ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಗೆಲುವು ಸಾಧಿಸಲೇಬೇಕೆಂದು ಪಣತೊಟ್ಟಿರುವ ಕಾಂಗ್ರೆಸ್​ ಸಮರ್ಥ ಅಭ್ಯರ್ಥಿಯ ಹುಡುಕಾಟ ನಡೆಸಿದೆ.

ಧಾರವಾಡ ಲೋಕ ಸಮರ: ಬಿಜೆಪಿ ನಾಗಲೋಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ರಣತಂತ್ರ
ಧಾರವಾಡ ಲೋಕ ಸಮರ: ಬಿಜೆಪಿ ನಾಗಲೋಟಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ರಣತಂತ್ರ

By ETV Bharat Karnataka Team

Published : Mar 13, 2024, 3:36 PM IST

ಹುಬ್ಬಳ್ಳಿ:ಧಾರವಾಡ ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟಿಯಾಗಿದೆ‌.‌ ವಿಜಯಸಂಕೇಶ್ವರ್​ ನಂತರ ಸತತವಾಗಿ ಪ್ರಹ್ಲಾದ್‌ ಜೋಶಿ ಜಯಗಳಿಸುತ್ತ ಬಂದಿದ್ದಾರೆ.‌ ಇದಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್‌ ಪಕ್ಷ ಹೊಸ ಹಾಗೂ ಅಚ್ಚರಿಯ ಅಭ್ಯರ್ಥಿ ಆಯ್ಕೆಗೆ ಮುಂದಾಗಿದೆ.

ಹೀಗಾಗಿ ಸೂಕ್ತ ಅಭ್ಯರ್ಥಿ ಆಯ್ಕೆ ‌ಕಾಂಗ್ರೆಸ್​ಗೆ ತಲೆನೋವಾಗಿದೆ. ಟಿಕೆಟ್ ಲಿಂಗಾಯತ ಸಮುದಾಯಕ್ಕೋ? ಅಥವಾ ಒಬಿಸಿಗೋ? ಎಂಬ ಪ್ರಶ್ನೆ ಪಕ್ಷದಲ್ಲಿ ಹುಟ್ಟಿಕೊಂಡಿದೆ. ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಅಳೆದು ತೂಗಿ ಗೆಲ್ಲುವ ಕುದುರೆಗೆ ಟಿಕೆಟ್ ನೀಡುವ ಬಯಕೆ ಇಟ್ಟುಕೊಂಡಿದೆ.‌ ಇದರೊಂದಿಗೆ ಪಕ್ಷದ ಮೂಲ ಸಿದ್ಧಾಂತ, ಸಾಮಾಜಿಕ ನ್ಯಾಯಕ್ಕೂ ಧಕ್ಕೆಯುಂಟಾಗದಂತೆ ಅಭ್ಯರ್ಥಿ ಆಯ್ಕೆಗೆ ಮನ್ನಣೆ ನೀಡಲಾಗುತ್ತಿದೆ.

ಪ್ರತಿ ವರ್ಷದಂತೆ ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ‌ ಕಾಂಗ್ರೆಸ್ ಪಕ್ಷ ಅಖಂಡ ಧಾರವಾಡ ಜಿಲ್ಲೆಯನ್ನು ಪರಿಗಣೆನೆಗೆ ತಗೆದುಕೊಂಡು ಆಯ್ಕೆ ಮಾಡುತ್ತದೆ. ಹಾವೇರಿ, ಗದಗ, ಧಾರವಾಡ ಮೂರು ಜಿಲ್ಲೆಗಳು ಸೇರಿಕೊಳ್ಳುತ್ತವೆ. ಸಹಜವಾಗಿ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಒಬಿಸಿ ಕೊಟ್ಟರೆ, ಇಲ್ಲಿ ಲಿಂಗಾಯತ ಸೇರಿದಂತೆ ಸಾಮಾನ್ಯ ವರ್ಗದ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತ ಬಂದಿದೆ. ಅದರಂತೆ ಈ ಹಿಂದೆ ಹಾವೇರಿಗೆ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುತ್ತಿತ್ತು. ಆದರೆ ಕಳೆದ ಚುನಾವಣೆಯಲ್ಲಿ ರೆಡ್ಡಿ ಸಮುದಾಯಕ್ಕೆ ನೀಡಕಾಗಿತ್ತು, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಮಣೆಹಾಕಿತ್ತು.

ಈ ಬಾರಿ ಉಲ್ಟಾ ಆಗುವ ಸಾಧ್ಯತೆ:ಸದ್ಯ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಆನಂದಸ್ವಾಮಿ ಗಡ್ಡದೇವರಮಠರಿಗೆ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ. ಇದರಿಂದಾಗಿ ಧಾರವಾಡಕ್ಕೆ ಒಬಿಸಿಗೆ ಟಿಕೆಟ್ ಕೊಡಬೇಕು. ಅಂದರೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಅಥವಾ ಕುರುಬ ಸಮುದಾಯಕ್ಕೆ ನೀಡಬೇಕೆಂಬ ಬೇಡಿಕೆ ಹೆಚ್ಚಾಗಿದೆ. ಮುಸ್ಲಿಂ ಸಮುದಾಯಕ್ಕೆ ನೀಡಿದರೆ ಚುನಾವಣೆಯಲ್ಲಿ ಗೆಲುವು ಪಕ್ಕಾ ಆದಂತಾಗುತ್ತದೆ. ಆಗ ಸಹಜವಾಗಿ ಬಿಜೆಪಿಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆಯೂ ಇದೆ. ಈಹಿನ್ನೆಲೆಯಿಂದಲೇ ಟಿಕೆಟ್ ಮೇಲೆ ಕಣ್ಣಿಟ್ಟಿದ್ದ ಶಾಕೀರ ಸನದಿ ಅವರಿಗೆ ಹುಡಾ ಅಧ್ಯಕ್ಷಗಿರಿ ನೀಡಿ ಸಮಾಧಾನ ಪಡಿಸಲಾಗಿದೆ. ಈ ಮೂಲಕ ಟಿಕೆಟ್ ಕೊಡುವುದು ಡೌಟು ಎಂದೇ ಹೇಳಲಾಗುತ್ತಿದೆ. ಇನ್ನು ಒಬಿಸಿ ಪಟ್ಟಿಯಲ್ಲಿ ಸೇರುವ ವಿನೋದ ಅಸೂಟಿಗೂ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷಗಿರುವ ಅವರನ್ನು ಸಮಾಧಾನ ಪಡಿಸಲಾಗಿದೆ. ಆದರೆ ಒಬಿಸಿಗೆ ಟಿಕೆಟ್ ನೀಡುವುದಾದರೆ ವಿನೋದ ಅಸೂಟಿ ಹಾಗೂ ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿದ್ದ ಡಿ.ಕೆ. ನಾಯ್ಕರ ಪುತ್ರ ಲೋಹಿತ ನಾಯ್ಕರ ಹೆಸರು ಮುನ್ನೆಲೆಗೆ ಬಂದಿದೆ.

ಒಬಿಸಿ ಬದಲು ಬಹುಸಂಖ್ಯಾತ ಲಿಂಗಾಯತ ಸಮುದಾಯಕ್ಕೆ ನೀಡಿದರೆ, ಲಿಂಗಾಯತರ ಬೆಂಬಲವೂ ಚುನಾವಣೆಯಲ್ಲಿ ಸಿಗಬಹುದು ಎಂಬ ಲೆಕ್ಕಾಚಾರವು ಇದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯದ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್​ ಲಿಂಬಿಕಾಯಿ, ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಳಿಯ ರಜತ್ ಉಳ್ಳಾಗಡ್ಡಿಮಠ ಹೆಸರು ಕೂಡ ಕೇಳಿ ಬರುತ್ತಿದೆ. ಆದರೆ ಇವರಲ್ಲಿ ಮೋಹನ್​ ಅವರ ಹೆಸರು ಕೊಂಚ ಮುಂಚೂಣಿಯಲ್ಲಿದೆ.

ಏಳು ಚುನಾವಣೆಯಿಂದಲೂ ಬಿಜೆಪಿಯದ್ದೇ ಪಾರುಪತ್ಯ:ಕಳೆದ 1996ರಿಂದ ನಡೆದ 7 ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಇಲ್ಲ. ಮೂರು ಬಾರಿ ಬಿಜೆಪಿಯಿಂದ ವಿಜಯ ಸಂಕೇಶ್ವರ ಗೆದ್ದಿದ್ದರೆ, ನಂತರದ ನಾಲ್ಕು ಚುನಾವಣೆಗಳಲ್ಲಿ ಪ್ರಹ್ಲಾದ ಜೋಶಿ ಗೆಲುವು ಸಾಧಿಸಿದ್ದಾರೆ. ಅಂದರೆ ಏಳು ಚುನಾವಣೆಯಿಂದಲೂ ಬಿಜೆಪಿಯದ್ದೇ ಪಾರುಪತ್ಯ ಆಗಿದೆ. ಈ ಸಲವೂ ಬಿಜೆಪಿಯಿಂದ ಪ್ರಹ್ಲಾದ ಜೋಶಿ ಅವರೇ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ. ಈ ಹಿನ್ನೆಲೆಯಲ್ಲಿ ಜೋಶಿ ಅವರ ಐದನೆಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕುವಂತಹ ಸಾಮರ್ಥ್ಯ ಇವರಿಗೆ ಇಲ್ಲದ ಕಾರಣ, ಅಭ್ಯರ್ಥಿಯನ್ನು ಅಳೆದು ತೂಗಿ ಹಾಕಲು ನಿರ್ಧರಿಸಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ‌.

ಇದನ್ನೂ ಓದಿ:ಸಿಎಎ ಜಾರಿಯು ಬಿಜೆಪಿಯ ಚುನಾವಣಾ ಗಿಮಿಕ್: ಸಿಎಂ ಸಿದ್ದರಾಮಯ್ಯ

ABOUT THE AUTHOR

...view details