ಬೆಂಗಳೂರು:ಕಾಂಗ್ರೆಸ್ ಲೋಕಸಭೆ ಚುನಾವಣೆಗಾಗಿ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪೈಕಿ ಕರ್ನಾಟಕದ ಏಳು ಕೈ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಏಳು ಕ್ಷೇತ್ರಗಳಿಗೆ ಕಾಂಗ್ರೆಸ್ ನಿರೀಕ್ಷಿತ ಅಭ್ಯರ್ಥಿಗಳ ಹೆಸರನ್ನೇ ಪ್ರಕಟಿಸಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಗುರುವಾರ ದೆಹಲಿಯಲ್ಲಿ ಸಿಇಸಿ ಸಭೆ ನಡೆಸಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿತ್ತು.
ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್:ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಹಾಲಿ ಸಂಸದ ಡಿ.ಕೆ.ಸುರೇಶ್ ಹೆಸರನ್ನು ಪ್ರಕಟಿಸಲಾಗಿದೆ. ಆ ಮೂಲಕ ಡಿ.ಕೆ.ಸುರೇಶ್ ಲೋಕಸಮರದಲ್ಲಿ ಮತ್ತೊಮ್ಮೆ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಲಿದ್ದಾರೆ. ಡಿ.ಕೆ.ಸುರೇಶ್ ಸ್ಪರ್ಧಿಸುವುದು ಬಹುತೇಕ ನಿರೀಕ್ಷಿತವಾಗಿತ್ತು. ಆದರೆ, ಡಿ.ಕೆ.ಸುರೇಶ್ ಸ್ವತ: ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮನಸ್ಸಿಲ್ಲ ಎಂದು ಹೇಳುತ್ತಿದ್ದರಿಂದ ಸ್ವಲ್ಪ ಗೊಂದಲ ಉಂಟಾಗಿತ್ತು. ಹೀಗಾಗಿ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಯಾಗಿ ಆರ್.ಆರ್.ನಗರ ಕ್ಷೇತ್ರದ ಪರಾಜಿತ ಕೈ ಅಭ್ಯರ್ಥಿ ಕುಸುಮಾ ಹೆಸರು ಬಲವಾಗಿ ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಹೈ ಕಮಾಂಡ್ ಮತ್ತೊಮ್ಮೆ ಡಿ.ಕೆ.ಸುರೇಶ್ಗೆ ಮಣೆ ಹಾಕಿದೆ.
ಶಿವಮೊಗ್ಗದಲ್ಲಿ ದೊಡ್ಡಮನೆ ಸೊಸೆಗೆ ಕೈ ಟಿಕೆಟ್:ಶಿವಮೊಗ್ಗ ಕ್ಷೇತ್ರದಿಂದ ನಿರೀಕ್ಷೆಯಂತೆ ಗೀತಾ ಶಿವರಾಜಕುಮಾರ್ಗೆ ಟಿಕೆಟ್ ನೀಡಿದೆ. ಆ ಮೂಲಕ ಶಿವಮೊಗ್ಗ ಕ್ಷೇತ್ರದಲ್ಲಿ ಹೈ ಪ್ರೊಫೈಲ್ ಚುನಾವಣಾ ಕದನ ನಡೆಯುವ ನಿರೀಕ್ಷೆ ಇದೆ. 2014ರ ಲೋಕಸಭೆ ಚುನಾವಣೆಯಲ್ಲಿ ಗೀತಾ ಶಿವರಾಜ್ ಕುಮಾರ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮಾಜಿ ಸಿಎಂ ಯಡಿಯೂರಪ್ಪ ಮುಂದೆ ಸೋಲು ಕಂಡಿದ್ದರು. ಇದೀಗ ಎರಡನೇ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಇದನ್ನೂಓದಿ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್ ಆಕಾಂಕ್ಷಿಗಳು ಯಾರು?
ಈ ಬಾರಿ ಕ್ಷೇತ್ರದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದ್ರೇಶ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದರು. ಇನ್ನು ಬಿಜೆಪಿಯ ಮಾಜಿ ಶಾಸಕ ಕುಮಾರ ಬಂಗಾರಪ್ಪ ಅವರನ್ನು ಕರೆತಂದು ಟಿಕೆಟ್ ನೀಡುವ ಬಗ್ಗೆನೂ ಕಾಂಗ್ರೆಸ್ನಲ್ಲಿ ಚರ್ಚೆ ನಡೆದಿತ್ತು. ಕೊನೆಯದಾಗಿ ಸಚಿವ ಮಧು ಬಂಗಾರಪ್ಪ ತಮ್ಮ ಅಕ್ಕನಿಗೆ ಲೋಕಸಭೆ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಬಿಜೆಪಿಯಿಂದ ಬಹುತೇಕ ಹಾಲಿ ಸಂಸದ ಬಿಎಸ್ವೈ ಪುತ್ರ ಬಿ.ಎಸ್.ರಾಘವೇಂದ್ರಗೆ ಟಿಕೆಟ್ ನೀಡುವ ಸಾಧ್ಯತೆ ಇರುವುದರಿಂದ ಶಿವಮೊಗ್ಗ ಲೋಕಸಭೆ ಚುನಾವಣೆ ರಣಕಣ ಕಳೆಗಟ್ಟಲಿದೆ.