ಕರ್ನಾಟಕ

karnataka

By ETV Bharat Karnataka Team

Published : Apr 1, 2024, 4:01 PM IST

Updated : Apr 1, 2024, 4:07 PM IST

ETV Bharat / state

ಬೆಂಗಳೂರು ಕೇಂದ್ರದಿಂದ ಪಿ.ಸಿ.ಮೋಹನ್, ಹಾಸನದಲ್ಲಿ ಶ್ರೇಯಸ್ ಪಟೇಲ್ ನಾಮಪತ್ರ ಸಲ್ಲಿಕೆ - Shreyas Patel P C Mohan Nomination

ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ನಡೆಯುತ್ತಿದೆ. ಇಂದು ಹಾಸನದಲ್ಲಿ ಕಾಂಗ್ರೆಸ್‌ ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.

shreyas-patel-nomination-submission-in-hassan
ಹಾಸನ ಶ್ರೇಯಸ್ ಪಟೇಲ್, ಬೆಂಗಳೂರು ಕೇಂದ್ರದಲ್ಲಿ ಪಿ. ಸಿ ಮೋಹನ್ ನಾಮಪತ್ರ ಸಲ್ಲಿಕೆ

ಹಾಸನ/ಬೆಂಗಳೂರು:ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಇಂದು ನಾಮಪತ್ರ ಸಲ್ಲಿಸಿದರು. ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಗೃಹಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ, ಬಿ.ಶಿವರಾಮು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಲಾಯಿತು.

ಬೆಂಗಳೂರು ಕೇಂದ್ರದಿಂದ ಪಿ.ಸಿ.ಮೋಹನ್ ನಾಮಪತ್ರ:ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮುನ್ನ ಮುತ್ಯಾಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಅರವಿಂದ ಲಿಂಬಾವಳಿ, ಗಾಲಿ ಜನಾರ್ದನ ರೆಡ್ಡಿ, ಸುರೇಶ್ ಕುಮಾರ್ ಜತೆಗೆ ಬಂದು ನಾಮಪತ್ರ ಸಲ್ಲಿಸಿದರು‌.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪಿ.ಸಿ.ಮೋಹನ್, "ನಾಯಕರುಗಳ ಜತೆಗೆ ನಾಮಪತ್ರ ಸಲ್ಲಿಸಿದ್ದೇನೆ. ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದಾರೆ. ಡೋರ್ ಟು ಡೋರ್ ಕ್ಯಾಂಪೇನ್ ಮಾಡುತ್ತಿದ್ದಾರೆ. ದೇಶದಲ್ಲಿ ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲಿದ್ದಾರೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು‌.

"ಈಗಾಗಲೇ ಕೇಂದ್ರದಿಂದ ಬೆಂಗಳೂರಿಗೆ ಸಾಕಷ್ಟು ಅನುದಾನ ತಂದಿದ್ದೇನೆ. ಸಬ್ ಅರ್ಬನ್ ರೈಲು ತರುವಲ್ಲಿ ಯಶಸ್ವಿಯಾಗಿದ್ದೇನೆ. ಮೆಟ್ರೋ ವಿಸ್ತರಣೆ ಮಾಡಲಾಗಿದೆ. ಸ್ಮಾರ್ಟ್ ಸಿಟಿ, ಪ್ರಧಾನಮಂತ್ರಿ ಆವಾಜ್ ಯೋಜನೆ ಅನುದಾನ ತರಲಾಗಿದೆ. ಹತ್ತು ವರ್ಷಗಳ ಮೋದಿ ಅವರ ಸಾಧನೆ ಹಾಗೂ ನಾನು ಸಂಸದನಾಗಿ ಮಾಡಿದ ಕೆಲಸ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇನೆ" ಎಂದರು.

ಇದಕ್ಕೂ ಮೊದಲು ಶಾಸಕ ಎಸ್.ರಘು ಹಾಗು ಕೆಲವು ಮುಖಂಡರನ್ನು ಒಳಬಿಡದ ಚುನಾವಣಾಧಿಕಾರಿ ಕೇಂದ್ರದ ಭದ್ರತಾ ದಳ ಸಿಬ್ಬಂದಿ ಜತೆ ಜಟಾಪಟಿ ನಡೆಯಿತು. ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿ ಜತೆ ಐವರು ಸೂಚಕರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಪಿ.ಸಿ.ಮೋಹನ್ ಅವರ ನಾಮಪತ್ರಕ್ಕೆ ಸೂಚಕರಾಗಿರುವ ರಘು ಅವರನ್ನು ಒಳಬಿಡಲು ಭದ್ರತಾ ಸಿಬ್ಬಂದಿ ನಿರಾಕರಿಸಿದರು. ಇದರಿಂದ ರಘು ಸಿಟ್ಟಾದರು.

ನಂತರ ಮಾತನಾಡಿದ ಶಾಸಕ‌ ಎಸ್.ರಘು, "ನಾನೂ ಒಬ್ಬ ಸೂಚಕ. ಆದರೂ ಒಳಗೆ ಬಿಟ್ಟಿಲ್ಲ. ಐವರು ಸೂಚಕರು ಬಂದಾಗಿದೆ ಅಂತ ನನ್ನ ಬಿಟ್ಟಿಲ್ಲ. ಚುನಾವಣಾಧಿಕಾರಿಗಳ ನಿಯಮ, ಕಾನೂನಿಗೆ ತಲೆ ಬಾಗುತ್ತೇನೆ" ಎಂದು ತಿಳಿಸಿದರು.

ಇದನ್ನೂ ಓದಿ:ಸಂಗಣ್ಣ ಕರಡಿ ಸಿಟ್ಟು ಶಮನ: ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಸಜ್ಜು - MP Sanganna Karadi

Last Updated : Apr 1, 2024, 4:07 PM IST

ABOUT THE AUTHOR

...view details