ಮಂಗಳೂರಲ್ಲಿ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ (ETV Bharat) ಮಂಗಳೂರು: ಕಾಂಗ್ರೆಸ್ ನಾಯಕ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮನೆ ಮೇಲೆ ದುಷ್ಕರ್ಮಿಗಳು ಬುಧವಾರ ರಾತ್ರಿ ಕಲ್ಲು ತೂರಾಟ ನಡೆಸಿದ್ದಾರೆ.
ಇತ್ತೀಚೆಗೆ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ದ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ನಿಂದ ನಡೆದ ಪ್ರತಿಭಟನೆಯಲ್ಲಿ ಐವನ್ ಡಿಸೋಜ ರಾಜ್ಯಪಾಲರಿಗೆ ಬಾಂಗ್ಲಾ ಪ್ರಧಾನಿಗಾದ ಪರಿಸ್ಥಿತಿ ಬರಬಹುದು ಎಂಬ ಹೇಳಿಕೆ ನೀಡಿದ್ದರು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಬಿಜೆಪಿ ಕಾರ್ಯಕರ್ತರು ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೂರು ನೀಡಿದ್ದರು. ಇದರ ಮಧ್ಯೆ ಈ ಘಟನೆ ನಡೆದಿದೆ.
ಬುಧವಾರ ರಾತ್ರಿ ಸುಮಾರು 11 ಗಂಟೆಗೆ ಘಟನೆ ನಡೆದಿದೆ. ಈ ಸಂದರ್ಭ ಐವನ್ ಡಿಸೋಜಾ ಅವರು ಮನೆಯಲ್ಲಿರದೆ ಬೆಂಗಳೂರಿನಲ್ಲಿ ಪಕ್ಷದ ಮೀಟಿಂಗ್ಗೆ ಹೋಗಿದ್ದರು. ಸುಮಾರು 5 ರಿಂದ 6 ಜನರ ತಂಡ ರಾತ್ರಿ 11ರ ಸುಮಾರಿಗೆ ನಗರದ ವೆಲೆನ್ಸಿಯದಲ್ಲಿರುವ ಐವನ್ ಡಿಸೋಜಾ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಿ ಘೋಷಣೆಗಳನ್ನು ಕೂಗಿ ಬಳಿಕ ಪರಾರಿಯಾಗಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲ್ಲು ತೂರಾಟದಿಂದ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್, "ರಾತ್ರಿ ಹೆಲ್ಮೆಟ್ ಹಾಕಿ ಬಂದವರು ಐವನ್ ಡಿಸೋಜ ಅವರ ಮನೆಗೆ ಕಲ್ಲು ಬಿಸಾಡಿದ್ದಾರೆ. ಆರೋಪಿಗಳನ್ನು ಬಂಧಿಸುವ ಕಾರ್ಯ ನಡೆಯುತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಸಿಎಂ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ವಿರೋಧಿಸಿ ಪಂಜಿನ ಮೆರವಣಿಗೆ