ಬೆಂಗಳೂರು: 2024ರ ಲೋಕಸಭಾ ಚುನಾವಣೆ ಫಲಿತಾಂಶದ ಹಿನ್ನಡೆಗೆ ಕಾರಣಗಳ ಹುಡುಕಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ಮಿಸ್ತ್ರಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಲಾಗಿದೆ. ಈ ಸಮಿತಿ ಇಂದಿನಿಂದ ಕೆಪಿಸಿಸಿ ಕಚೇರಿಯಲ್ಲಿ 2 ದಿನಗಳ ಕಾಲ ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸಲಿದೆ.
ರಾಜ್ಯದಲ್ಲಿ ಕಾಂಗ್ರೆಸ್ಗೆ ನಿರೀಕ್ಷಿಸಿದಷ್ಟು ಸ್ಥಾನಗಳು ಬಂದಿಲ್ಲ. 15 ಸ್ಥಾನ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕೇವಲ 9 ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. ನೀರಸ ಫಲಿತಾಂಶದ ಹಿನ್ನೆಲೆಯಲ್ಲಿ ಹೈಕಮಾಂಡ್ ಸತ್ಯಶೋಧನಾ ಸಮಿತಿ ರಚಿಸಿತ್ತು. ರಾಜ್ಯಕ್ಕೆ ಭೇಟಿ ನೀಡಿರುವ ಸಮಿತಿ ಸದಸ್ಯರು ಪಕ್ಷದ ಮುಖಂಡರು, ಪದಾಧಿಕಾರಿಗಳು, ಸಂಸದರು, ಶಾಸಕರು, ಕಾರ್ಯಾಧ್ಯಕ್ಷರನ್ನು ಭೇಟಿ ಮಾಡಿ ಅಭಿಪ್ರಾಯ, ಮಾಹಿತಿ ಕಲೆಹಾಕಲಿದ್ದಾರೆ.
ಎಲ್ಲಿ ಲೋಪಗಳಾಗಿವೆ ಎಂಬ ಬಗ್ಗೆ ಸಮಿತಿ ವಾಸ್ತವಿಕ ಅಂಶಗಳನ್ನು ಪಕ್ಷದ ಕಾರ್ಯಕರ್ತರು, ಮುಖಂಡರಿಂದ ಪಡೆದುಕೊಳ್ಳಲಿದೆ. ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಸರಣಿ ಸಭೆ ನಡೆಯಲಿದ್ದು ನಾಯಕರು, ಪದಾಧಿಕಾರಿಗಳು, ಮುಖಂಡರು ತಮ್ಮ ಅಭಿಪ್ರಾಯ ನೀಡಲಿದ್ದಾರೆ. ನಂತರ ಹೈಕಮಾಂಡ್ಗೆ ವರದಿ ಸಲ್ಲಿಸಲಿದೆ.
ಸಚಿವರು, ಶಾಸಕರು, ಸಂಸದರ ಜೊತೆ ಸಭೆ: ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಮಧುಸೂಧನ್ ಮಿಸ್ತ್ರಿ ಟೀಂ ಸಭೆ ನಡೆಸಲಿದೆ. ಕ್ವೀನ್ಸ್ ರಸ್ತೆಯ ಕಚೇರಿಯಲ್ಲಿ ನಡೆಯಲಿರುವ ಈ ಸಭೆಯಲ್ಲಿ ಮಿಸ್ತ್ರಿ ಅವರಿಗೆ ಗೌರವ್ ಗೊಗೋಯ್ ಹಾಗೂ ಎಐಸಿಸಿ ನಾಯಕ ಹಿಬಿ ಹಿಡನ್ ಸಾಥ್ ನೀಡಲಿದ್ದಾರೆ. ರಾಜ್ಯದಿಂದ ಆಯ್ಕೆಯಾದ ಎಐಸಿಸಿ ಪದಾಧಿಕಾರಿಗಳು, ಸಿಡಬ್ಲ್ಯುಸಿ ಸದಸ್ಯರ ಜೊತೆ ಮೊದಲಿಗೆ ಸಭೆ ನಡೆಸಲಿದ್ದಾರೆ. ನಂತರ ಹಿರಿಯ ನಾಯಕರು, ಸಚಿವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.
ಲೋಕಸಭೆ, ರಾಜ್ಯಸಭೆ ಸದಸ್ಯರ ಅಭಿಪ್ರಾಯಗಳನ್ನೂ ಆಲಿಸಲಿದ್ದಾರೆ. ನಂತರ ಶಾಸಕರು, ವಿಧಾನಪರಿಷತ್ ಸದಸ್ಯರ ಜೊತೆ ಮೀಟಿಂಗ್ ನಡೆಸಲಿದ್ದಾರೆ. ಆ ನಂತರ ಜಿಲ್ಲಾಧ್ಯಕ್ಷರು, ಕೆಪಿಸಿಸಿ ಪದಾಧಿಕಾರಿಗಳು, ಪರಾಜಿತ ಅಭ್ಯರ್ಥಿಗಳ ಬಳಿಯಿಂದಲೂ ಮಾಹಿತಿ ಕಲೆಹಾಕಲಿದ್ದಾರೆ. ಕಾಂಗ್ರೆಸ್ ಕಾರ್ಮಿಕ ಘಟಕ, ಎನ್ಎಸ್ಯುಐ, ಯೂತ್ ಕಾಂಗ್ರೆಸ್, ಮಹಿಳಾ ಘಟಕ, ಎಸ್ಸಿಎಸ್ಟಿ ಘಟಕ, ಒಬಿಸಿ, ಅಲ್ಪಸಂಖ್ಯಾತ ಘಟಕ, ಸೇವಾದಳದ ಸದಸ್ಯರ ಜೊತೆಗೂ ಸಭೆ ನಡೆಸಿ ಸೋಲಿನ ಕಾರಣಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಅಂತಿಮವಾಗಿ ನಿಗಮ ಮಂಡಳಿ ಅಧ್ಯಕ್ಷರು ಹಾಗೂ ಐವರು ಕಾರ್ಯಾಧ್ಯಕ್ಷರಿಂದಲೂ ಮಾಹಿತಿ ಪಡೆಯಲಿದ್ದಾರೆ.