ಹುಬ್ಬಳ್ಳಿ:''ಸುಳ್ಳು ಮತ್ತು ಭ್ರಷ್ಟಾಚಾರ ಕಾಂಗ್ರೆಸ್‌ನ ಗಂಗೋತ್ರಿಯಾಗಿದೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ನಗರದಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮಹದಾಯಿ ಯೋಜನೆಗೆ ಹಿನ್ನೆಡೆಯಾಗಿದ್ದರೆ, ಅದಕ್ಕೆ ನೇರವಾದ ಕಾಂಗ್ರೆಸ್ ಪಕ್ಷವೇ ಕಾರಣ. ಈ ಹಿಂದೆ ಮೊಟ್ಟ ಮೊದಲ ಟ್ರಿಬ್ಯೂನಲ್ ಹೋಗುವ ಅವಶ್ಯಕತೆ ಇರಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಗಳಿದ್ದಾಗ ಟ್ರಿಬ್ಯೂನಲ್ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದರಿಂದ 8ರಿಂದ 10 ವರ್ಷ ವಿಳಂಬವಾಯಿತು. ಅತ್ಯಂತ ದೊಡ್ಡ ತಪ್ಪು ಮಾಡಿದ್ದು ಕಾಂಗ್ರೆಸ್ ಪಕ್ಷ'' ಎಂದು ಆರೋಪಿಸಿದರು.
''ಟ್ರಿಬ್ಯೂನಲ್ನಲ್ಲಿ ಬರೆದು ಕೊಟ್ಟು ಮಹದಾಯಿಯಿಂದ ಮಲಪ್ರಭಾ ಇಂಟರ್ ಲಿಂಕಿಂಗ್ ಜೋಡಣೆಗೆ ಕಾಂಗ್ರೆಸ್ನವರು ಗೋಡೆ ಕಟ್ಟಿದ್ದರು. ನೀರಾವರಿ ಯೋಜನೆಗೆ ಗೋಡೆಕಟ್ಟಿದ ಅಪಖ್ಯಾತಿ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಇದೆ. ನಾವು ಕೆನಾಲ್ ಮಾಡಿದ್ರೆ ಇವರು ಗೋಡೆ ಕಟ್ಟಿದರು'' ಎಂದು ಆಕ್ರೋಶ ವ್ಯಕ್ತಪಡಿಸಿದರು.
''ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಇದ್ದಾಗ ಸಂಪೂರ್ಣವಾಗಿ ವಿರೋಧ ಮಾಡುತ್ತಾ ಬಂದ್ರು. ನಮ್ಮ ಸರ್ಕಾರ ಗೋವಾದಲ್ಲಿದ್ದರು ಯೋಜನೆಯ ಡಿಪಿಆರ್ ಅನುಮೋದನೆ ಕೊಟ್ಟಿದ್ದು ಬಿಜೆಪಿ, ಇವರ ಕೈಯಲ್ಲಿ ಅಧಿಕಾರ ಇದ್ದಾಗ ಡಿಪಿಆರ್ ಅನುಮೋದನೆ ಮಾಡಿಸಲು ಆಗಿರಲಿಲ್ಲ. ಇದೀಗ ಪರಿಸರ ಇಲಾಖೆಯಲ್ಲಿ ಡಿಪಿಆರ್ ಅನುಮೋದನೆ ಬಾಕಿಯಿದೆ. ಅಲ್ಲಿ ದಾಖಲೆಗಳನ್ನು ಕೇಳಿದ್ದಾರೆ. ನಾವು ಒತ್ತಡ ತಂದು ಪರಿಸರ ಇಲಾಖೆಯಿಂದ ಅನುಮೋದನೆ ಕೊಡಿಸುತ್ತೇವೆ'' ಎಂದು ಬೊಮ್ಮಾಯಿ ಹೇಳಿದರು.