ಹುಬ್ಬಳ್ಳಿ:ದೇಶಕ್ಕೆ ಮಾದರಿಯಾದ ಕರ್ನಾಟಕ ಮಾಡೆಲ್ (ಕಾಂಗ್ರೆಸ್ ಗ್ಯಾರಂಟಿ) ಹಾಗೂ ಬಿಜೆಪಿಯ ಚೊಂಬು ಮಾಡೆಲ್ ನಡುವೆ ಈ ಬಾರಿ ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹಣಾಹಣಿ ನಡೆಯುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ. ನಗರದಲ್ಲಿ ಇಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನುಷ್ಠಾನಗೊಳಿಸಿರುವ ಗೃಹ ಲಕ್ಷ್ಮಿ ಯೋಜನೆಯಿಂದ 1.20 ಕೋಟಿ ಮಹಿಳೆಯರು, ಗೃಹ ಜ್ಯೋತಿಯಿಂದ 1.18 ಕೋಟಿ ಕುಟುಂಬಗಳು, ಶಕ್ತಿ ಯೋಜನೆಯಿಂದ 195 ಕೋಟಿ ಜನರ ಓಡಾಟ (ಪ್ರತೀ ದಿನ 35 ಲಕ್ಷ ಮಹಿಳೆಯರು), ಅನ್ನ ಭಾಗ್ಯ ಯೋಜನೆಯಿಂದ 4.49 ಕೋಟಿ ಜನರಿಗೆ ಉಪಯೋಗವಾಗಿದೆ ಎಂದು ಅವರು ವಿವರಿಸಿದರು.
ಇನ್ನು, 1.50 ಲಕ್ಷ ಯುವ ಪದವೀಧರರಿಗೆ ಯುವ ನಿಧಿಸಹಿತ ಮಧ್ಯವರ್ತಿಗಳಿಲ್ಲದೆ ವಾರ್ಷಿಕ 58,000 ಕೋಟಿ ರೂ. ವರ್ಗಾವಣೆಯಾಗಲಿದೆ. ರಾಜ್ಯದ ಮೂರು ಕೋಟಿ ಜನರಿಗೆ ವಾರ್ಷಿಕ 1.20 ಲಕ್ಷ ರೂ. ಆದಾಯ ದೊರೆಯಲಿದೆ. ಗ್ರಾಮೀಣ, ನಗರ ಜನ ಜೀವನದಲ್ಲಿ ಸುಧಾರಣೆಯಾಗಿದ್ದರ ಪರಿಣಾಮ ಪ್ರಧಾನಿ ಮೋದಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ನಕಲು ಮಾಡಿದ್ದಾರೆ ಎಂದು ಆರೋಪಿಸಿದರು.