ಬೆಳಗಾವಿ: ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಖುಷಿಯೊಂದಿಗೆ ನಾವು ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅಂತ್ಯ ಹಾಡ್ತಿದ್ದೇವೆ. ಈ ಚುನಾವಣೆ ಕಾಂಗ್ರೆಸ್ ಭರವಸೆಗಳ ಅನುಷ್ಠಾನ ವರ್ಸಸ್ ಬಿಜೆಪಿ ಬುರಡೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದಲ್ಲಿಂದು ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ, ಗ್ಯಾರಂಟಿ ಗಾಳಿ ಬೀಸುತ್ತಿದೆ. ಒಂದು ವೋಟಿಗೆ 10 ಗ್ಯಾರಂಟಿ. ದೇಶದ ಜನರ ಬದುಕಿನಲ್ಲಿ ಬದಲಾವಣೆ ತರಲು ಐತಿಹಾಸಿಕ ತೀರ್ಮಾನ ಮಾಡಿದ್ದೇವೆ. ಗ್ಯಾರಂಟಿ ಕಾರ್ಡ್ ಮನೆ ಮನೆಗೆ ತಲುಪಿಸಿ, ಮತ ಕೇಳ್ತಿದ್ದೇವೆ ಎಂದರು.
ಬಿಜೆಪಿಯವರು ಭ್ರಮೆಯಲ್ಲಿದ್ದಾರೆ, ಗ್ಯಾರಂಟಿ ನಿಲ್ಲಿಸುವ ಉತ್ಸಾಹದಲ್ಲಿದ್ದಾರೆ. ನೇರವಾಗಿ ಫಲಾನುಭವಿಗಳಿಗೆ ಯೋಜನೆ ತಲುಪಿಸುತ್ತಿದ್ದೇವೆ. ಎಸ್‌ಸಿ, ಎಸ್‌ಟಿ ಇಲಾಖೆಗೆ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡ್ತಿದ್ದೇವೆ. ಹಿಂದುಳಿದವರ ಕಲ್ಯಾಣಕ್ಕೆ ಬಿಎಸ್‌ವೈ, ಬೊಮ್ಮಾಯಿ ಬುರುಡೆ ಸರ್ಕಾರ ಏನೂ ಮಾಡಲಿಲ್ಲ. ಪರಿಸರ ಇಲಾಖೆ ಅನುಮತಿ ಇಲ್ಲದಿದ್ದರೂ ಮಹಾದಾಯಿ ಯೋಜನೆಯ ಟೆಂಡರ್ ಕೂಡ ಕರೆದಿದ್ದೇವೆ. ಬಿಜೆಪಿಯವರು ಕೇವಲ ಸುಳ್ಳು ಹೇಳ್ತಾರೆ, ನಾವು ಸತ್ಯ ಹೇಳ್ತೀವಿ ಎಂದು ಹೇಳಿದರು.
ರೈತ ವಿರೋಧಿ ಕಾನೂನು ರದ್ದು ಮಾಡಲು ದೊಡ್ಡ ಪ್ರಮಾಣದ ಹೋರಾಟ ಆದವು. ಆದರೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರ ಆ ಕಾನೂನು ರದ್ದು ಮಾಡಲಿಲ್ಲ. ರೈತರ ಪಕ್ಷ ಎನ್ನುವ ದಳದವರೂ ಈಗ ಬಿಜೆಪಿಯವರ ಜೊತೆಗೆ ಸೇರಿದ್ದಾರೆ. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದ ಹೆಸರಲ್ಲಿ ರಾಜಕಾರಣ ಇರಬಾರದು. ಅರ್ಚಕರ ಅನುಕೂಲಕ್ಕೆ ನಾವು ಮುಜರಾಯಿ ಇಲಾಖೆಯಿಂದ ಕ್ರಮ ಕೈಗೊಂಡಿದ್ದೇವೆ. ಅದಕ್ಕೂ ಬಿಜೆಪಿಯವರು ವಿರೋಧ ಮಾಡ್ತಿದ್ದಾರೆ. ರಾಜ್ಯಕ್ಕೆ ಒಂದೂ ರೂಪಾಯಿ ಬಿಡುಗಡೆ ಮಾಡದ ಮೋದಿ ಮತಯಾಚನೆ ಮಾಡ್ತಿರುವುದು ಹೇಗೆ ಎಂದು ಗೊತ್ತಾಗ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.