ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅವರದೇ ಭಾರದಿಂದ ಕುಸಿದು ಬೀಳಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
ಚುನಾವಣಾ ಅವಲೋಕನ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕತ್ವಕ್ಕಾಗಿ 4 ರೀತಿಯ ಪೈಪೋಟಿ ಕಾಂಗ್ರೆಸ್ ಪಕ್ಷದಲ್ಲಿದೆ. ಸಿಎಂ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಮಾಡಿದ ಭಾಷಣ ಇದಕ್ಕೆ ಜ್ವಲಂತ ಉದಾಹರಣೆ. ಲೋಕಸಭಾ ಚುನಾವಣಾ ಫಲಿತಾಂಶದ ಮೂಲಕ ತಮ್ಮ ಕುರ್ಚಿ ಮೇಲೆ ಅಪಾಯ ಇದೆ. ಒಕ್ಕಲಿಗರು ಸಿಎಂ ಆಗುವುದಾಗಿ ಡಿ.ಕೆ.ಶಿವಕುಮಾರ್ ಅವರೂ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಗುಪ್ತಗಾಮಿನಿ ರೂಪದಲ್ಲಿ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಈ ಚುನಾವಣೆಯನ್ನೂ ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಜೆಡಿಎಸ್ ಜೊತೆಗಿನ ಸಂಬಂಧ ಕುರಿತು ಸುದೀರ್ಘವಾದ ಸಭೆ ನಡೆಸಲಾಗಿದೆ. ಲೋಕಸಭೆ ಚುನಾವಣೆ ವೇಳೆ ಜೆಡಿಎಸ್ ಜೊತೆ ಹೊಂದಾಣಿಕೆ ಕೊರತೆ ಆಗಿಲ್ಲ. ಜೆಡಿಎಸ್ ಸ್ಪರ್ಧಿಸಿದ 3 ಕ್ಷೇತ್ರಗಳಲ್ಲಿ ಬಿಜೆಪಿಯಿಂದ ನಮ್ಮ ಕಾರ್ಯಕರ್ತರು ಚುನಾವಣಾ ಕಾರ್ಯಕ್ಕೆ ಧುಮುಕಿದ್ದಾರೆ. ಉಳಿದ ಕ್ಷೇತ್ರಗಳಲ್ಲಿ ಜೆಡಿಎಸ್ ಸಹಕಾರ ನಮಗೆ ಕೊಟ್ಟಿದೆ. ಎಲ್ಲ 28 ಕ್ಷೇತ್ರದಲ್ಲಿ ಗೆಲುವಿನ ಉತ್ಸಾಹದಲ್ಲಿ ನಾವಿದ್ದೇವೆ.
ಕಡಿಮೆ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪುವಂಥ ಪ್ರಯತ್ನ ಯಶಸ್ವಿಯಾಗಿ ನಡೆದಿದೆ. 3 ರೀತಿಯ ಸಾರ್ವಜನಿಕ ಸಂಪರ್ಕವನ್ನು ಯಶಸ್ವಿಯಾಗಿ ಮಾಡಿದ್ದೇವೆ. ದೊಡ್ಡ ದೊಡ್ಡ ಸಾರ್ವಜನಿಕ ಸಭೆ, ರೋಡ್ ಶೋ, ಮನೆಯಂಗಳದ ಸಭೆಗಳ ಮೂಲಕ ಸಾರ್ವಜನಿಕರನ್ನು ಸರ್ಕಾರದ ಸಾಧನೆ ತಿಳಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೇರಿದಂತೆ 14 ಜನ ರಾಷ್ಟ್ರೀಯ ಪ್ರಮುಖರು ಕರ್ನಾಟಕದಲ್ಲಿ 79 ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿದ್ದಾರೆ. 39 ಕಡೆಗಳಲ್ಲಿ ರೋಡ್ ಶೋ, ರಾಜ್ಯದ 30 ನಾಯಕರಿಂದ 557 ಸಭೆಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ.