ಬೆಂಗಳೂರು:ಈ ಬಾರಿ ಕರ್ನಾಟಕವು ತೀವ್ರ ಬರಗಾಲ ಎದುರಿಸಿದೆ. ಹೀಗಾಗಿ ಜನರು, ಪ್ರಾಣಿ-ಪಕ್ಷಿಗಳೂ ನೀರಿನ ಹಾಹಾಕಾರ ಎದುರಿಸಿದ ಹಲವಾರು ಘಟನೆಗಳು ವರದಿಯಾಗಿವೆ. ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಮಳೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ನಡುವೆ ಮತ್ತೆ ಕಾವೇರಿ ನೀರಿನ ವಿಚಾರ ರಾಜಕೀಯದಲ್ಲಿ ಸದ್ದು ಮಾಡಿದೆ.''ನೀರಿನ ಹಾಹಾಕಾರದ ನಡುವೆಯೂ ತಮಿಳುನಾಡಿಗೆ ನೀರು ಬಿಟ್ಟು ರಾಜ್ಯಕ್ಕೆ ದ್ರೋಹವೆಸಗಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಇದೀಗ ಮತ್ತೊಮ್ಮೆ ತಮಿಳುನಾಡಿಗೆ ನೀರು ಹರಿಸಲು ಶರಣಾಗಿ ಕನ್ನಡಿಗರಿಗೆ ದ್ರೋಹ ಬಗೆಯುತ್ತಿದೆ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
''ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ಹಿತಾಸಕ್ತಿ ಕಾಪಾಡಲು ಮತ್ತೊಮ್ಮೆ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಬರಗಾಲದ ನಡುವೆಯೂ ಮೇ ತಿಂಗಳಿನಲ್ಲಿ ಮತ್ತೊಮ್ಮೆ ತಮಿಳುನಾಡಿಗೆ 2.5 ಟಿಸಿಂಸಿ ನೀರು ಬಿಡಲು ಶರಣಾಗಿದೆ. ರಾಜ್ಯದ ಪರವಾಗಿ ಸಮರ್ಥವಾದ ವಾದ ಮಂಡಿಸಲು ಸಿದ್ಧರಾಗಿ ಎಂದು ಎಷ್ಟು ಬಾರಿ ಎಚ್ಚರಿಸಿದರೂ ನಿರ್ಲಕ್ಷ್ಯಿಸಿ ಕಾಲಹರಣ ಮಾಡಿದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಈಗ ಮತ್ತೊಮ್ಮೆ ಕಾವೇರಿಯ ಮಡಿಲನ್ನು ಬರಿದು ಮಾಡಿ ಕನ್ನಡಿಗರಿಗೆ ದ್ರೋಹ ಬಗೆದಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು, ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಟೀಕಿಸಿದ್ದಾರೆ.