ದಾವಣಗೆರೆ: "ಏನೇ ಇದ್ರು ತಪ್ಪನ್ನೇ ಮುಂದಿಟ್ಟುಕೊಂಡು ಶತ್ರುವನ್ನು ಬಲಿಷ್ಠ ಮಾಡಬಾರದು. ಈಗ ದೆಹಲಿಯಲ್ಲಿ ಆಗಿದೆ, ಹಿಂದೆ ಹರಿಯಾಣದಲ್ಲಿ ಆಗಿದೆ. ಇಬ್ಬರಿಗೂ ಜಂಬ ಇದೆ. ಈಗೋಯಿಸಮ್ ಇದೆ, ಹೀಗಾಗಿ ಸೋಲಾಗಿದೆ" ಎಂದು ಹೈಕಮಾಂಡ್ ವಿರುದ್ಧ ಸಚಿವ ಕೆ. ರಾಜಣ್ಣ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, "ರಾಷ್ಟ್ರ ರಾಜಕಾರಣ ಅರಿತು ಶತ್ರುವನ್ನು ಸೋಲಿಸಬೇಕು. ಜಾತ್ಯಾತೀತರು ಒಂದಾಗಬೇಕು, ಜಾತಿಯನ್ನು ಸೋಲಿಸಬೇಕು. ಮತ ವಿಭಜನೆಯಿಂದ ಬಿಜೆಪಿ ಗೆದ್ದಿದೆ. ಇಲ್ಲಿ ರಾಜಕೀಯ ಜಂಜಾಟ ಇದೆ. ನಮ್ಮವರೇ ದ್ವೇಷ ಸಾಧಿಸಿಕೊಂಡು ಶತ್ರುವನ್ನು ಬಲಿಷ್ಠ ಮಾಡಿದ್ದಾರೆ" ಎಂದು ಹೇಳಿದರು.
ಸಿಎಂ ಬದಲಾವಣೆ ಕುರಿತು ಮಾತನಾಡಿ, "ಯಾರ್ ಸಿಎಂ ಆದ್ರು ಏನೇ ಆದ್ರು ತೀರ್ಮಾನ ಅಂತಿಮ ಹೈಕಮಾಂಡ್ನದ್ದಾಗಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾವೆಲ್ಲ ಬದ್ಧರಿದ್ದೇವೆ. ಧ್ವನಿ ಇಲ್ಲದ ಸಮುದಾಯಗಳಿಗೆ ಅರಿವು, ಅಧಿಕಾರ ಹಂಚಿಕೆ, ಸಮುದಾಯ ಬಲಿಷ್ಠ ಮಾಡುವುದು ಎಸ್ಸಿ ಎಸ್ಟಿ ಸಮಾವೇಶದ ಉದ್ದೇಶ. ಕಾಂಗ್ರೆಸ್ ನೇತೃತ್ವದಲ್ಲಿ ಎಸ್ಸಿ ಎಸ್ಟಿ ಸಮಾವೇಶ ಮಾಡುತ್ತಿದ್ದೇವೆ. ರಾಜಕೀಯ ವಂಚಿತ ಸಮುದಾಯಗಳಿಗೆ ಅನುಕೂಲ ಮಾಡುವ ಉದ್ದೇಶ ಅಂದುಕೊಂಡಿದ್ದೇವೆ. ಹಾಗಾಗಿ ಸಮಾವೇಶ ಮಾಡೇ ಮಾಡುತ್ತೇವೆ. ಮಾರ್ಚ್ 7ನೇ ತಾರೀಕಿಗೆ ಬಜೆಟ್ ಮಂಡನೆ ಆಗಲಿದೆ. ಪೂರ್ಣ ಪ್ರಮಾಣದ ಬಜೆಟ್ ಇದಾಗಲಿದೆ. ಜನರಿಗೆ ಅನುಕೂಲ ಮತ್ತು ಒಳ್ಳೆಯ ಬಜೆಟ್ ಕೊಡುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಎಲ್ಲ ಜನರ ವಿಶ್ವಾಸವನ್ನು ತೆಗೆದುಕೊಂಡು ಬಜೆಟ್ ರೂಪಿಸುತ್ತಾರೆ" ಎಂದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತೆ- ಸಚಿವ ಶಿವರಾಜ್ ತಂಗಡಗಿ :"ಜನರಿಗೆ ಗೊತ್ತಿದೆ ಬಿಜೆಪಿಯವರು ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂಬುದು. ಬರೀ ಜಾತಿ ಧರ್ಮದ ಬಗ್ಗೆ ಮಾತನಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಸೂಕ್ತ ಬಹುಮತದೊಂದಿದೆ ಕಾಂಗ್ರೆಸ್ ದೇಶದಲ್ಲಿ ಅಧಿಕಾರಕ್ಕೆ ಬರುತ್ತದೆ. ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ. ಇವಿಎಂ ಮಷಿನ್ ಬಗ್ಗೆ ನಮಗೆ ಈಗಲೂ ಅನುಮಾನ ಇದೆ. ದೇಶದ ಜನಕ್ಕೆ ಅನುಮಾನ ಬರಬಾರದು ಎಂದು ಅಲ್ಲಲ್ಲಿ ಗೆಲ್ಲಿಸುವ ಕೆಲಸ ಮಾಡುತ್ತಿದ್ದಾರೆ. ಅದು ಬಿಟ್ಟು ಉಳಿದ ಕಡೆ ಇವಿಎಂ ಮಷಿನ್ನಲ್ಲಿ ಸಾಕಷ್ಟು ಅನುಮಾನ ಇದೆ. ಬಿಜೆಪಿಯವರದ್ದು ದೇಶದಲ್ಲಿ ಕೊಡುಗೆ ಏನಿದೆ. ಹಳೇ ರೋಡ್ಗೆ ಟಾರ್ ಹಾಕುವ ಕೆಲಸ ಬಿಜೆಪಿ ಮಾಡುತ್ತಿದೆ ಅಷ್ಟೇ. ಹೇಳಿಕೊಳ್ಳುವ ಯಾವುದೇ ಅಭಿವೃದ್ಧಿ ಕೆಲಸಗಳಿಲ್ಲ" ಸಚಿವ ಶಿವರಾಜ್ ತಂಗಡಗಿ ಅಕ್ರೋಶ ವ್ಯಕ್ತಪಡಿಸಿದರು.