ಕರ್ನಾಟಕ

karnataka

ETV Bharat / state

'ರಾಜಭವನ ರಾಜಕೀಯ ಭವನ ಆಗಬಾರದು': ಎನ್​ಡಿಎ ನಾಯಕರ ಪ್ರಾಸಿಕ್ಯೂಷನ್​ ಅನುಮತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಕಾಂಗ್ರೆಸ್​ ಮನವಿ - Congress appeals to governor - CONGRESS APPEALS TO GOVERNOR

ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ನಾಯಕರು, ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿ, ಎನ್​ಡಿಎ ನಾಯಕರ ವಿರುದ್ಧವೂ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

CONGRESS APPEALS TO THE GOVERNOR DEMANDING PERMISSION TO PROSECUTION OF NDA LEADERS
ಎನ್​ಡಿಎ ನಾಯಕರ ಪ್ರಾಸಿಕ್ಯೂಷನ್​ ಅನುಮತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಕಾಂಗ್ರೆಸ್​ ಮನವಿ (ETV Bharat)

By ETV Bharat Karnataka Team

Published : Aug 31, 2024, 2:18 PM IST

ಎನ್​ಡಿಎ ನಾಯಕರ ಪ್ರಾಸಿಕ್ಯೂಷನ್​ ಅನುಮತಿಗೆ ಆಗ್ರಹಿಸಿ ರಾಜ್ಯಪಾಲರಿಗೆ ಕಾಂಗ್ರೆಸ್​ ಮನವಿ (ETV Bharat)

ಬೆಂಗಳೂರು: ಎನ್​ಡಿಎ ನಾಯಕರ ವಿರುದ್ಧದ ಪ್ರಕರಣಗಳ ಸಂಬಂಧವೂ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದಿಂದ ರಾಜಭವನಕ್ಕೆ ಪಾದಯಾತ್ರೆ ತೆರಳಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು, ಸಂಸದರು ನಾಯಕರು ಎನ್​​​ಡಿಎ ನಾಯಕರ ವಿರುದ್ಧದ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ಆಗ್ರಹಿಸಿದರು. ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದ ಕಾಂಗ್ರೆಸ್ ನಾಯಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರದ ಚುಕ್ಕಾಣಿಯಂತೆ ರಾಜ್ಯಪಾಲರು ವರ್ತಿಸುತ್ತಿದ್ದಾರೆ. ಬಿಜೆಪಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧದ ಪ್ರಕರಣಗಳ ಸಂಬಂಧ ಪ್ರಾಸಿಕ್ಯೂಷನ್ ಅನುಮತಿ ನೀಡುವಂತೆ ಆಗ್ರಹಿಸಿದರು.

ಸಿಎಂ ಸಿದ್ದರಾಮಯ್ಯ ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಕಾಂಗ್ರೆಸ್ ನಾಯಕರು ಪಾದಯಾತ್ರೆ ಮೂಲಕ ರಾಜಭವನಕ್ಕೆ ತೆರಳಿದ್ದು, ಪಾದಯಾತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಪಾಲ್ಗೊಳ್ಳಲಿಲ್ಲ. ರಾಜಭವನಕ್ಕೆ ತೆರಳಿದ ಕಾಂಗ್ರೆಸ್ ನಾಯಕರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಯಾರೋ ದೂರು ಕೊಟ್ಟರೆಂದು ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಟ್ಟಿದ್ದಾರೆ. ಆದರೆ, ಬಿಜೆಪಿ ಜೆಡಿಎಸ್‌ನವರ ವಿರುದ್ಧ ತನಿಖಾ ವರದಿ ಸಲ್ಲಿಸಲು ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡುತ್ತಿಲ್ಲ. ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡುವ ಅಗತ್ಯವಿಲ್ಲ ಎಂದರೂ ಕೊಟ್ಟರು. ಹೀಗಾಗಿ ರಾಜಭವನ ರಾಜಕೀಯ ಭವನ ಆಗಬಾರದು. ಸಂವಿಧಾನದಡಿ ರಚನೆಯಾದ ಪೀಠ ರಾಜ್ಯಪಾಲರದ್ದು‌. ಇಂತಹ ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಆಗಬಾರದು. ನ್ಯಾಯಸಮ್ಮತವಾಗಿ ಈ ನಾಲ್ವರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೊಡಿ ಎಂದು ಮನವಿ ಮಾಡಿದ್ದೇವೆ" ಎಂದರು.

ನಾಲ್ವರ ಪ್ರಾಸಿಕ್ಯೂಷನ್ ಅರ್ಜಿ ಇತ್ಯರ್ಥ:"ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಜನಾರ್ದನ ರೆಡ್ಡಿ, ಶಶಿಕಲಾ ಜೊಲ್ಲೆ, ನಿರಾಣಿ ಮೇಲಿನ ಪ್ರಾಸಿಕ್ಯೂಷನ್ ಅರ್ಜಿ ಸಂಬಂಧ ನಮ್ಮ ಬಳಿ ಏನೂ ಇಲ್ಲ. ಎಲ್ಲಾ ಡಿಸ್ಪೋಸ್ ಮಾಡಿದ್ದೀವಿ ಎಂದು ರಾಜ್ಯಪಾಲರು ಹೇಳಿದ್ದಾರೆ. ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಎಚ್ಚರಿಸಿದ ಬಳಿಕ ಎನ್​ಡಿಎ ನಾಯಕರ ಮೇಲಿನ ಅರ್ಜಿಗಳ ಸಂಬಂಧ ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ರಾಜ್ಯಪಾಲರ ಜೊತೆ ಏನು ಮಾತನಾಡಿದ್ದೇವೆ ಎಂಬುದನ್ನು ಎಲ್ಲವನ್ನೂ ಹೇಳುವುದಕ್ಕೆ ಆಗುವುದಿಲ್ಲ. ರಾಜ್ಯಪಾಲರ ಹುದ್ದೆ, ರಾಜಭವನದ ಗೌರವವನ್ನು ಕಾಪಾಡಬೇಕೆಂದು ಮನವಿ ಮಾಡಿದ್ದೇವೆ. ರಾಜ್ಯಪಾಲರು ಮಾತನಾಡಿದ್ದನ್ನೆಲ್ಲಾ ಹೇಳೋಕಾಗಲ್ಲ. ಆದರೆ ನಮ್ಮ ಕಚೇರಿಯಲ್ಲಿ ಆ ದಾಖಲೆಗಳಿಲ್ಲ ಅಂದಿದ್ದಾರೆ. ಇದರ ಬಗ್ಗೆ ಪರಿಶೀಲನೆ ಮಾಡುತ್ತೇವೆ ಅಂದಿದ್ದಾರೆ" ಎಂದರು.

ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ, "ಸಿದ್ದರಾಮಯ್ಯ ಪರವಾಗಿ ನಾವು ರಾಜಭವನ ಚಲೋ ಮಾಡುತ್ತಿಲ್ಲ. ರಾಜ್ಯಪಾಲರ ಆದೇಶದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದೇವೆ. ರಾಜ್ಯಪಾಲರ ಕಚೇರಿ ದುರಪಯೋಗ ಆಗುತ್ತಿದೆ. ಇದರ ವಿರುದ್ಧ ನಮ್ಮ ಹೋರಾಟವಾಗಿದೆ. ಮುಖ್ಯಮಂತ್ರಿ ವಿಚಾರದಲ್ಲಿ ಒಂದೇ ದಿನದಲ್ಲಿ ನೋಟಿಸ್ ನೀಡಿರುವುದು ಎಲ್ಲರಿಗೂ ಗೊತ್ತು. ಈ ಹಿಂದೆ ರಾಜ್ಯಪಾಲರ ಬಳಿ ಹಲವರ ಫೈಲ್​ಗಳು ಹೋಗಿವೆ. ಜನಪ್ರತಿನಿದಿಗಳ ವಿರುದ್ಧ ತನಿಖೆ ಮಾಡುವುದಕ್ಕೆ ಫೈಲ್ ಹೋಗಿದೆ. ಇಲ್ಲಿ ಸೆಲೆಕ್ಟಿವ್ ಸ್ಯಾಂಕ್ಷನ್ ಆಗಿದೆ. ರಾಜ್ಯಪಾಲರು ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬೇಕು. ಪಕ್ಷದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು" ಎಂದರು.

"ನಿರಾಣಿ ಸೇರಿದಂತೆ ಹಲವರ ವಿರುದ್ಧ ಫೈಲ್ ಇವೆ. ಬೇರೆ ಕೇಸ್​ಗಳಿಗೂ ಆದೇಶ ನೀಡಿ. ಕಾನೂನು ಪರವಾಗಿ ಕೆಲಸ ಮಾಡಬೇಕು. ಸಂವಿಧಾನ ಪೀಠಕ್ಕೆ ಗೌರವ ತನ್ನಿ" ಎಂದು ಆಗ್ರಹಿಸಿದರು.

ಇದನ್ನೂ ಓದಿ:ಎನ್​ಡಿಎ ನಾಯಕರ ಮೇಲೂ ಪ್ರಾಸಿಕ್ಯೂಷನ್ ಅನುಮತಿಗೆ ಆಗ್ರಹಿಸಿ ಕಾಂಗ್ರೆಸ್​ನಿಂದ ರಾಜಭವನ ಚಲೋ ಪ್ರತಿಭಟನೆ - Congress Rajabhavan Chalo protests

ABOUT THE AUTHOR

...view details