ಬೆಂಗಳೂರು :ಜೈನಮುನಿಗಳಾದ ಆಚಾರ್ಯ 108 ವಿದ್ಯಾಸಾಗರ ಮಹಾರಾಜರ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚಿಸಲಾಯಿತು. ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ. ಖಾದರ್ ಅವರು, ಸಂತಾಪ ಸೂಚನಾ ನಿರ್ಣಯ ಮಂಡಿಸಿ, ವಿದ್ಯಾಸಾಗರ ಮಹಾರಾಜರು ನಿಧನರಾಗಿರುವುದನ್ನು ಅತ್ಯಂತ ವಿಷಾದದಿಂದ ಸದನಕ್ಕೆ ತಿಳಿಸಿದರು.
ವಿದ್ಯಾಸಾಗರ ಮಹಾರಾಜರು 1946ರ ಅಕ್ಟೋಬರ್ 10ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗದಲ್ಲಿ ಜನಿಸಿದರು. ದಿಗಂಬರ ಜೈನ ಪಂಥದವರಾಗಿದ್ದ ಮುನಿಗಳು ತಮ್ಮ 22ನೇ ವಯಸ್ಸಿನಲ್ಲಿ ಆಚಾರ್ಯ ಜ್ಞಾನಸಾಗರ ಮುನಿಮಹಾರಾಜರಿಂದ ಮುನಿದೀಕ್ಷೆ ಪಡೆದು ನಂತರ ಆಚಾರ್ಯ ಪದವಿ ಪಡೆದಿದ್ದ ವಿದ್ಯಾಸಾಗರ ಮಹಾರಾಜರು ಸಂಸ್ಕೃತ, ಪ್ರಾಕೃತ ಭಾಷೆಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ನಿರಂಜನ ಶತಕ, ಭಾವನ ಶತಕ, ಶ್ರಮನ ಶತಕ ಪ್ರಮುಖವಾಗಿವೆ. ಅಲ್ಲದೆ, ಕನ್ನಡ, ಹಿಂದಿ ಹಾಗೂ ಮರಾಠಿ ಸೇರಿದಂತೆ 8 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು, ಹಿಂದಿಯಲ್ಲಿ ರಚಿಸಿದ ಮೂಖಮಾಠಿ ಎಂಬ ಮಹಾಕಾವ್ಯವು ಪ್ರಸಿದ್ಧಿಯಾಗಿದೆ ಎಂದು ಹೇಳಿದರು.
ಜೈನಮುನಿಗಳಾಗಿ ವಿದ್ಯಾಸಾಗರ ಮಹಾರಾಜರು 120 ಜನರಿಗೆ ಮುನಿದೀಕ್ಷೆ ಹಾಗೂ ಹಲವರಿಗೆ ಬ್ರಹ್ಮಚರ್ಯ ದೀಕ್ಷೆಗಳನ್ನು ನೀಡಿದ್ದಾರೆ. ದೇಶದಲ್ಲಿಯೇ ಅತಿದೊಡ್ಡ ಗೋಶಾಲೆಯನ್ನು ನಿರ್ಮಿಸಿದ್ದು, ಬಡ ನಿರ್ಗತಿಕ ಮಕ್ಕಳಿಗೆ ಪದವಿಯವರೆಗೆ ಉಚಿತ ಶಿಕ್ಷಣವನ್ನು ನೀಡಿದ್ದಾರೆ. ತಮ್ಮ ಜೀವನದುದ್ದಕ್ಕೂ ಜೈನ ಧರ್ಮದ ತತ್ವಗಳನ್ನು ಪಾಲಿಸಿ, ಬೋಧಿಸುತ್ತ ಕವಿ, ಯೋಗಿ, ಸಾಧಕ-ಚಿಂತಕ ಹಾಗೂ ದಾರ್ಶನಿಕ ರೂಪದಲ್ಲಿ ಕಾಣಿಸಿಕೊಂಡಿದ್ದ ಮೇರು ಸಂತ ಆಚಾರ್ಯರು ಛತ್ತೀಸ್ಗಡ ರಾಜ್ಯದ ಡೋಂಗರಗಡದಲ್ಲಿರುವ ಚಂದ್ರಗಿರಿ ತೀರ್ಥದಲ್ಲಿ ಸಲ್ಲೇಖನ ವ್ರತ ಕೈಗೊಂಡು, ನಿನ್ನೆ ನಸುಕಿನಜಾವ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ವಿಷಾದಿಸಿದರು.
ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ವಿದ್ಯಾಸಾಗರ ಮಹಾರಾಜರು ಸಲ್ಲೇಖನ ವ್ರತ ಆಚರಣೆ ಮೂಲಕ ದೇಹತ್ಯಾಗ ಮಾಡಿದ್ದಾರೆ. ಲೌಖಿಕ ಜೀವನವನ್ನು ತ್ಯಾಗ ಮಾಡಿ ಮೇಲ್ಮಟ್ಟದ ಜೀವನ ನಡೆಸಿ ನಮ್ಮೆಲ್ಲರಿಗೂ ದಾರಿ ತೋರಿಸಿದ್ದಾರೆ. ನಾವೆಲ್ಲ ಆಸೆ, ಆಕಾಂಕ್ಷೆಗಳ ಜಂಜಾಟದ ಬದುಕಿನಲ್ಲಿ ಸಿಲುಕುತ್ತೇವೆ. ಅವುಗಳ ಹೊರತಾಗಿಯೂ ಜೀವನ ನಡೆಸಬಹುದು ಎಂದು ಅವರು ತೋರಿಸಿದ್ದಾರೆ. ಅವರ ಆಲೋಚನೆಗಳು ಅಮರವಾಗಿ ನಮ್ಮೊಂದಿಗೆ ಉಳಿಯಲಿದೆ ಎಂದು ಸ್ಮರಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ವಿದ್ಯಾಸಾಗರ ಮಹಾರಾಜರ ಇಡೀ ಕುಟುಂಬ ಜೈನ ಪರಂಪರೆಗೆ ಸೇರಿದವರು. ನಮ್ಮ ದೇಶದಲ್ಲಿ ಋಷಿಮುನಿಗಳ ಪರಂಪರೆ ಇದೆ. ಧರ್ಮ, ಸಂಸ್ಕೃತಿ ಉಳಿಸಲು ಅವರು ಮಾಡಿರುವ ಕಾರ್ಯ ಸ್ಮರಣೀಯ ಎಂದರು.