ಬೆಂಗಳೂರು:ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಆಡಳಿತಾತ್ಮಕ ಲೋಪಗಳು ಹಾಗೂ ತಪ್ಪಿಸಬಹುದಾಗಿದ್ದ ವೆಚ್ಚಗಳನ್ನು ಮಾಡಿದ್ದರಿಂದ, ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುವುದು ಮಹಾಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಬೆಳಕಿಗೆ ಬಂದಿದೆ.
2022ಕ್ಕೆ ಕೊನೆಗೊಂಡ ಆರ್ಥಿಕ ವರ್ಷದ ಇಲಾಖೆಗಳು ಮತ್ತು ಸಾರ್ವಜನಿಕ ವಲಯ ಉದ್ಯಮಗಳ ಮೇಲಿನ ಅನುಸರಣಾ ಲೆಕ್ಕಪರಿಶೋಧನಾ ವರದಿಯನ್ನು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್. ಕೆ. ಪಾಟೀಲ್ ಇಂದು ವಿಧಾನಸಭೆಯಲ್ಲಿ ಮಂಡಿಸಿದರು.
ನಾಲ್ಕು ಶಾಸನಬದ್ಧ ನಿಗಮಗಳನ್ನು ಒಳಗೊಂಡಂತೆ 68 ಸಾರ್ವಜನಿಕ ವಲಯದ ಉದ್ಯಮಗಳು ಇದ್ದು, ಈ ಪೈಕಿ 11 ಕಂಪನಿಗಳು ಲೆಕ್ಕಪರಿಶೋಧನೆಯ ವೇಳೆ ಸ್ಥಗಿತಗೊಂಡಿದ್ದವು. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಮಗಕ್ಕೆ 12.78 ಕೋಟಿ ರೂ. ನಷ್ಟವಾಗಿರುವುದು ಕಂಡು ಬಂದಿದೆ. ನಿಗಮದ ಸ್ವಂತ ಕಟ್ಟಡ ನಿರ್ಮಾಣದಲ್ಲಿ ವಿಪರೀತ ವಿಳಂಬವಾದ ಪರಿಣಾಮವಾಗಿ ಇಷ್ಟು ಮೊತ್ತ ಬಾಡಿಗೆ ನೀಡುವಲ್ಲಿ ಸಂದಾಯವಾಗಿದೆ. ಇದು ತಪ್ಪಿಸಬಹುದಾಗಿದ್ದ (ಅನಗತ್ಯ) ವೆಚ್ಚವಾಗಿದೆ ಎಂದು ಸಿಎಜಿ ವಿವರಿಸಿದೆ.
ಶ್ರೀಗಂಧ ಉತ್ಪನ್ನಗಳನ್ನು ತಯಾರಿಸುವ ರಾಜ್ಯದ ಪ್ರತಿಷ್ಠಿತ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜಂಟ್ಸ್ (ಕೆಎಸ್‌ಡಿಎಲ್) ಸಂಸ್ಥೆಯು ಅನಗತ್ಯವಾಗಿ ಲಾವಂಚ ಬೇರಿನ ತೈಲ ಖರೀದಿಸಿರುವುದು ವರದಿಯಲ್ಲಿ ಬೆಳಕಿಗೆ ಬಂದಿದೆ.
ಸುಗಂಧ ಉತ್ಪನ್ನಗಳಲ್ಲಿ ಲಾವಂಚ ಬೇರಿನ ತೈಲ ಉಪಯೋಗವನ್ನು ನಿಲ್ಲಿಸಬೇಕು ಎನ್ನುವ ನಿರ್ಣಯಕ್ಕೆ 2020ರಲ್ಲೇ ಕೆಎಸ್‌ಡಿಎಲ್ ನಿರ್ದೇಶಕ ಮಂಡಳಿ ಬಂದಿತ್ತು. ಆದಾಗ್ಯೂ 2021ರ ಫೆಬ್ರುವರಿಯಲ್ಲಿ 1,893 ಕಿಲೋಗ್ರಾಂಗಳಷ್ಟು ಲಾವಂಚದ ಬೇರಿನ ತೈಲವನ್ನು ಖರೀದಿಸಲಾಯಿತು. ಇದರಿಂದ 4.87 ಕೋಟಿ ರೂ. ನಷ್ಟವನ್ನು ಬೊಕ್ಕಸ ಅನುಭವಿಸಿದೆ ಎಂದು ಸಿಎಜಿ ವರದಿ ಗುರುತಿಸಿದೆ.
ಇನ್ನೊಂದು ಪ್ರಮುಖ ಉದ್ಯಮರಂಗವಾಗಿರುವ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆಯು 2.64 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ಸಿಎಜಿ ಹೇಳಿದೆ.