ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುರಿತು ನಗರದ ವಿವಿಧೆಡೆ ಅವಹೇಳನಕಾರಿ ಪೋಸ್ಟರ್ ಅಂಟಿಸಿದ್ದವರನ್ನ ಕೂಡಲೇ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. ಬೆಂಗಳೂರು ನಗರದ ಸುತ್ತಲು ಪೋಸ್ಟರ್ ಅಂಟಿಸಿರುವ ಕಿಡಿಗೇಡಿಗಳು ಹಾಗೂ ಅವರ ಹಿಂದಿರುವ ರಾಜಕೀಯ ಪಕ್ಷದ ನಾಯಕರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
'ಹಾಸನ ಪೆನ್ ಡ್ರೈವ್ ವಿಚಾರ ಪ್ರಸ್ತಾಪವಾದಾಗ ನಾವೂ ಸಹ ಪ್ರತಿಭಟನೆ ನಡೆಸಿದ್ದೇವೆ. ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ಅಸಂವಿಧಾನಿಕವಾಗಿ ಇಷ್ಟು ಕೀಳುಮಟ್ಟದ ಪದಗಳನ್ನ ಬಳಸಿರುವ ಕಿಡಿಗೇಡಿಗಳನ್ನ ಪತ್ತೆ ಹಚ್ಚಬೇಕು ಎಂದು ದೂರು ನೀಡಿದ್ದೇವೆ. ನೀತಿಸಂಹಿತೆ ಸಹ ಜಾರಿಯಲ್ಲಿ ಇರುವುದರಿಂದ ಚುನಾವಣಾ ಆಯುಕ್ತರೊಂದಿಗೆ ಚರ್ಚಿಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ' ಎಂದು ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ತಿಳಿಸಿದ್ದಾರೆ.
ಎಫ್ಐಆರ್ ದಾಖಲು: ಮತ್ತೊಂದೆಡೆ ಪೋಸ್ಟರ್ ಅಂಟಿಸಿದ್ದವರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರಸ್ತುತ ಜಾಹೀರಾತು ಪ್ರದರ್ಶನ ಮತ್ತು ಜಾಹೀರಾತು ಫಲಕಗಳನ್ನು ಹಾಕುವುದನ್ನ ನಿಷೇಧಿಸಲಾಗಿದೆ. ಆದರೂ, ಸಹ ಸಾರ್ವಜನಿಕ ಉಪದ್ರವ ಉಂಟು ಮಾಡಿರುವ ಆರೋಪದಡಿ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ರಾತ್ರೋರಾತ್ರಿ ನಗರದ ಕೆಲವು ಕಡೆಗಳಲ್ಲಿ ಅವರ ವಿರುದ್ಧ ಅವಹೇಳನಕಾರಿ ಪೋಸ್ಟರ್ ಗಳನ್ನ ಅಂಟಿಸಲಾಗಿತ್ತು.