ಕರ್ನಾಟಕ

karnataka

ETV Bharat / state

ಬಾರ್ ಲೈಸೆನ್ಸ್​ಗೆ 20 ಲಕ್ಷ ಲಂಚದ ಬೇಡಿಕೆ ಆರೋಪ; ಮಂಡ್ಯ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು

ಬಾರ್ ಅಂಡ್ ರೆಸ್ಟೋರೆಂಟ್​ಗೆ ಪರವಾನಗಿ ನೀಡಲು ಅಬಕಾರಿ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಮಂಡ್ಯದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.

Excise Inspector Office
ಅಬಕಾರಿ ನಿರೀಕ್ಷಕರ ಕಚೇರಿ (ETV Bharat)

By ETV Bharat Karnataka Team

Published : Nov 28, 2024, 6:23 PM IST

ಮಂಡ್ಯ :ಬಾರ್ ಲೈಸೆನ್ಸ್​ಗೆ 20 ಲಕ್ಷ ರೂ ಲಂಚದ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆ ಅಬಕಾರಿ ಡಿಸಿ ವಿರುದ್ದ ಲೋಕಾಯುಕ್ತಕ್ಕೆ ದೂರು ಕೊಟ್ಟಿರುವ ಘಟನೆ ಜಿಲ್ಲೆಯಿಂದ ವರದಿಯಾಗಿದೆ.

ಇನ್​​ಸ್ಪೆಕ್ಟರ್ ವಿರುದ್ಧ ಲೋಕಾಯುಕ್ತಕ್ಕೆ ದೂರು: ಮದ್ದೂರು ತಾಲೂಕು ಚಂದೂಪುರ ಗ್ರಾಮದಲ್ಲಿ ಸಿಎಲ್ 7 ಬಾರ್ ಅಂಡ್ ರೆಸ್ಟೋರೆಂಟ್​ಗೆ ಅನುಮತಿ ಪಡೆಯಲು ತಮ್ಮ ತಾಯಿ ಲಕ್ಷ್ಮಮ್ಮರ ಹೆಸರಿನಲ್ಲಿ ಪುನೀತ್ ಎಂಬುವವರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಆದರೆ, ಅಬಕಾರಿ ಇಲಾಖೆ ಅಧಿಕಾರಿಗಳು ಅರ್ಜಿಯನ್ನು ತಿರಸ್ಕರಿಸಿದ್ದರು. ಅನಂತರ ಖುದ್ದಾಗಿ ಇಲಾಖೆಗೆ ತೆರಳಿ ಅರ್ಜಿ ಸಲ್ಲಿಕೆ ಮಾಡಿದಾಗ ಈ ವೇಳೆ ನಲವತ್ತು ಲಕ್ಷ ರೂ. ಲಂಚ ನೀಡಲು ಅಧಿಕಾರಿಗಳು ಬೇಡಿಕೆ ಇಟ್ಟಿದ್ದು, ಕೊನೆಗೆ 20 ಲಕ್ಷವನ್ನಾದರೂ ನೀಡಬೇಕು ಎಂದು ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ಪುನೀತ್ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿ ಹಾಗೂ ಇನ್​​ಸ್ಪೆಕ್ಟರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಈ ಬಗ್ಗೆ ದೂರುದಾರ ಪುನೀತ್ ಮಾತನಾಡಿ, ''ನಾನು ಸಿಎಲ್ 7 ಬಾರ್ ಅಂಡ್​ ರೆಸ್ಟೋರೆಂಟ್​ಗೆ 5 ಬಾರಿ ಅರ್ಜಿ ಸಲ್ಲಿಸಿದ್ದೆ. 4 ಬಾರಿ ರಿಜೆಕ್ಟ್​ ಮಾಡಿದ್ದಾರೆ. ಮೊದಲ ಬಾರಿ ಅಪ್ಲಿಕೇಷನ್ ಹಾಕಿದಾಗ ಆನ್​ಲೈನ್​ನಲ್ಲಿ ಏಕೆ ಹಾಕಿದ್ದೀರಿ?. ನಮ್ಮ ಗಮನಕ್ಕೆ ತಂದು ಹಾಕಬೇಕು. ಹೀಗೆ ಏಕಾಏಕಿ ಹಾಕಿರುವುದು ಸರಿಯೇ? ಎಂದು ಇನ್ಸ್​​ಪೆಕ್ಟರ್​ ಪ್ರಶ್ನಿಸಿದ್ದರು. ನಂತರ ಡಿಸಿ ಅವರನ್ನ ಭೇಟಿಯಾಗಿ ಅಂತಾರೆ, ಅವರನ್ನ ಭೇಟಿಯಾದರೆ ಏನಿದೆ ಮಾಮೂಲಿ ಅದನ್ನ ಸೆಟ್ಲಮೆಂಟ್​ ಮಾಡಿ ಅಂತಾರೆ. ನಾನು ಏನನ್ನೂ ಕೊಟ್ಟಿಲ್ಲ. ನಂತರ ಅಪ್ಲಿಕೇಷನ್ ರಿಜೆಕ್ಟ್ ಮಾಡಿದ್ರು'' ಎಂದರು.

ಲೋಕಾಯುಕ್ತ ಅಧಿಕಾರಿಗಳಿಗೆ ದೂರು : ''ಮತ್ತೆ ಅಪ್ಲಿಕೇಷನ್ ಹಾಕಿ ನಾನು ಡಿಸಿಯವರನ್ನ ಭೇಟಿ ಮಾಡಿದೆ. ಅಲ್ಲೂ ಅದೇ ಕತೆ, ಅವರ ಡಿಮಾಂಡ್​ಗೆ ಕ್ಕೆ ಒಪ್ಪದಿದ್ದಾಗ ನನ್ನ ಅರ್ಜಿಯನ್ನು ತಿರಸ್ಕಾರ ಮಾಡಿದ್ದಾರೆ. ಇದೀಗ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು'' ಎಂದು ದೂರುದಾರರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ :ಲಂಚಕ್ಕೆ ಬೇಡಿಕೆ ಇಟ್ಟ ಆರೋಪ; ಲೋಕಾಯುಕ್ತ ಬಲೆಗೆ‌ ಬಿದ್ದ ಬುಡಾ ಆಯುಕ್ತ, ಸಿಬ್ಬಂದಿ

ABOUT THE AUTHOR

...view details