ಬೆಂಗಳೂರು:ಡಾ. ಸಿಎನ್ ಮಂಜುನಾಥ್ ಅವರ ಅಭ್ಯರ್ಥಿತನವನ್ನು ಡಿಕೆ ಬ್ರದರ್ಸ್ ಅಥವಾ ನಾವು ನಿರೀಕ್ಷೆ ಮಾಡಿರಲಿಲ್ಲ. ಎಲ್ಲ ಕಾಲ ಕೂಡಿ ಬಂದಿದೆ. ಪ್ರಕೃತಿಯೇ ಅವರ ಅಭ್ಯರ್ಥಿತನವನ್ನು ಬಯಸಿದೆ. ಮೋದಿ ಟೀಂನಲ್ಲಿ ಜನಾಧರಿತ ಆಡಳಿತ ನೀಡಲು ಮಂಜುನಾಥ ಅವರಂಥ ಜನಪ್ರಿಯ ವ್ಯಕ್ತಿ ಬೇಕಿದೆ. ಗ್ರಾಮಾಂತರದ ಉಸಿರು ಕಟ್ಟಿಸುವ ವಾತಾವರಣದಿಂದ ಹೊರಬರಲು ಡಾ. ಮಂಜುನಾಥ್ ಅವರಂಥ ಅಭ್ಯರ್ಥಿ ಬೇಕು ಎಂದು ಮಾಜಿ ಡಿಸಿಎಂ ಡಾ. ಸಿಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ಚುನಾವಣೆಯಲ್ಲಿ ಧರ್ಮ ಅಧರ್ಮದ ಯುದ್ಧ ನಡೆಯುತ್ತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಿ ಮಾಡಲು ಜನರು ಎದುರು ನೋಡುತ್ತಿದ್ದಾರೆ. ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರ ಗೆದ್ದು ಮೋದಿ ಕೈ ಬಲಪಡಿಸಬೇಕು. ಕರ್ನಾಟಕ ಪೊಲಿಟಿಕಲ್ ಲೀಡರ್ ಶಿಪ್ನಲ್ಲಿ ಅಗ್ರಗಣ್ಯವಾಗಿರಬೇಕು. ಕಳೆದ ಬಾರಿ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರ ಗೆದ್ದಿತ್ತು. ಗ್ರಾಮಾಂತರದಲ್ಲಿ ಪ್ರತಿಷ್ಠೆ ತೋರಿಸುವ ಅವಶ್ಯಕತೆ ಬೇಕಿಲ್ಲ. ಡಾ ಮಂಜುನಾಥ್ ಬರ್ತಾರೆ ಎಂದು ಡಿಕೆ ಬ್ರದರ್ಸ್ ಆಗಲಿ, ನಾವು ಯಾರೇ ಆಗಲಿ ಅಂದುಕೊಂಡಿರಲಿಲ್ಲ. ಎಲ್ಲವೂ ಕಾಲದ ನಿರ್ಧಾರವಾಗಿದೆ. ಮಂಜುನಾಥ್ ಅವರಂತ ಸ್ಪರ್ಧೆ ದೇಶಕ್ಕೆ ಮಾದರಿಯಾಗುತ್ತಿದೆ.
ನನಗೆ ಆಗಲಿ, ಮುನಿರತ್ನಗಾಗಲಿ ರಾಜಕೀಯಕ್ಕೆ ಬರುವಂತೆ ಒತ್ತಾಯ ಮಾಡಿಲ್ಲ. ಆದರೆ, ಮಂಜುನಾಥ್ ಅವರನ್ನು ಒತ್ತಾಯ ಮಾಡಿ ರಾಜಕೀಯಕ್ಕೆ ಕರೆತರಲಾಗಿದೆ. ಗ್ರಾಮಾಂತರದಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಕಾಂಗ್ರೆಸ್ನವರು ನಮ್ಮ ನೀರು ನಮ್ಮ ಹಕ್ಕು ಅಂತಾ ಮಾಡಿದರು. ಆದರೆ, ಅದು ಎಲ್ಲಿಗೆ ಹೋಯ್ತು ಅಂತಾನೇ ಗೊತ್ತಿಲ್ಲ. ಬೆಂಗಳೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಲು ಕಾರಣ ಕಾಂಗ್ರೆಸ್. ಪ್ರತಿಪಕ್ಷಕ್ಕೂ ಅರ್ಹವಲ್ಲ ಈ ಪಕ್ಷಕ್ಕೆ ಮತ ಹಾಕೋದೇ ವೇಸ್ಟೂ. ಬೇಕಾದರೆ ಯುಪಿಎ ಹಾಗೂ ಎನ್ಡಿಎ ಸರ್ಕಾರದ ಅಧಿಕಾರವದಿ ಹೋಲಿಕೆ ಮಾಡಲಿ. ಇದು ಶಿವಕುಮಾರ್ ಚುನಾವಣೆ ಅಲ್ಲ, ಸಿದ್ದರಾಮಯ್ಯ ಚುನಾವಣೆ ಅಲ್ಲ, ಇದು ಪ್ರಧಾನಿ ನರೇಂದ್ರ ಮೋದಿಯ ಚುನಾವಣೆ ಗ್ಯಾರಂಟಿ. ಸುಳ್ಳಿನ ಮೂಲಕ ಸುರೇಶ್ ಜನರ ಮುಂದೆ ಹೋಗುತ್ತಿದ್ದಾರೆ. ಕನಕಪುರ ಕ್ಷೇತ್ರವೇ ರಾಜ್ಯದಲ್ಲಿ ಹಿಂದುಳಿದ ಕ್ಷೇತ್ರವಾಗಿದೆ. ಅಭಿವೃದ್ಧಿ, ಶೈಕ್ಷಣಿಕ, ಆರೋಗ್ಯ ಕ್ಷೇತ್ರದಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ರಾಮಮಂದಿರ ನಿರ್ಮಾಣ ಕೂಡ ಕೈ ಬಿಟ್ಟಿದ್ದೀರಿ, ರಾಮನಗರದ ಮೆಡಿಕಲ್ ಕಾಲೇಜು ತಗೊಂಡು ಹೋಗಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಗ್ರಾಮಾಂತರದಲ್ಲಿ ಶಾಂತಿ ಕಾಪಾಡೋದು ಬಹಳ ಮುಖ್ಯ. ಭಯದ ವಾತಾವರಣ ಇರಬಾರದು. ಶಾಂತಿಯುತ ಮತದಾನ ನಡೆಯಬೇಕು. ಹಾಗಾಗಿ, ಪ್ಯಾರಾ ಮಿಲಿಟರಿ ಫೋರ್ಸ್ ನಿಯೋಜಿಸಬೇಕು. ಡಿಕೆ ಸುರೇಶ್ ಗೆಲ್ಲೋಕೆ ಪಾಪ ಏನೇನೋ ಸುಳ್ಳು ಹೇಳುತ್ತಿದ್ದಾರೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗ್ತಾರೆ ಎಂದು ಸಂಸದ ಸುರೇಶ್ಗೂ ಗೊತ್ತು. ಅದಕ್ಕಾಗಿ ಎಲ್ಲ ಕಡೆಯೂ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಡಿಕೆ ಸಹೋದರ ವಿರುದ್ಧ ಅಶ್ವತ್ಥ ನಾರಾಯಣ್ ಗಂಭೀರ ಆರೋಪ ಮಾಡಿದರು.