ಬೆಂಗಳೂರು: ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ 976 ಕೃಷಿ ಭೂಮಿಯಲ್ಲಿ ಭೂ ಪರಿವರ್ತನೆ ಮಾಡದಿದ್ದರೂ ಮದ್ಯದಂಗಡಿ ಸೇರಿದಂತೆ ಇನ್ನಿತರ ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ನೀಡಿರುವ ಕಂದಾಯ ಇಲಾಖೆ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಅರ್ಜಿದಾರರ ಮವಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೋಲಾರದ ಅಂಬೇಡ್ಕರ್ ನಗರದ ನಿವಾಸಿ ಕೆ. ರಮೇಶ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ.ಅಂಜಾರಿಯಾ ಮತ್ತು ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿತು. ಅಲ್ಲದೇ, ಕಾನೂನು ಬಾಹಿರವಾಗಿರುವ ಎಲ್ಲ ಅನುಮತಿಗಳನ್ನು ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಮನವಿ ಪತ್ರವನ್ನು ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಕೋಲಾರ ಕಂದಾಯ ಇಲಾಖೆ ಉಪ ಆಯುಕ್ತರಿಗೆ ಸೂಚನೆ ನೀಡಿದೆ ಅರ್ಜಿ ಇತ್ಯರ್ಥ ಪಡಿಸಿತು.
ಮದ್ಯದಂಗಡಿಗಳ ನಡೆಸಲು ಪರವಾನಗಿ ನೀಡಿರುವುದನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿದಾರರು ಮಾರ್ಚ್ 4 ರಂದು ಸಲ್ಲಿಸಿದ್ದ ಮನವಿಯನ್ನು ಕಾನೂನು ಪ್ರಕಾರ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದೆ. ಅರ್ಜಿದಾರರ ಆರೋಪಗಳು ಗಂಭೀರ ಸ್ವರೂಪದಿಂದ ಕೂಡಿದೆ. ಕೃಷಿ ಜಮೀನಿನ ರಕ್ಷಣೆ ಮಾಡಬೇಕು ಎಂಬುದು ಅರ್ಜಿದಾರರ ಕಾಳಜಿಯಾಗಿದೆ ಎಂದು ಅಭಿಪ್ರಾಯಪಟ್ಟಿತು. ಅಲ್ಲದೇ, ಅರ್ಜಿದಾರರು ಎಲ್ಲೆಲ್ಲಿ ಕೃಷಿ ಭೂಮಿಯಲ್ಲ ಕೃಷಿಯೇತರ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಬಗ್ಗೆ ನಿರ್ದಿಷ್ಟವಾಗಿ ಮಾಹಿತಿ ನೀಡಿ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕು. ಅರ್ಜಿದಾರರು ಅಂತಹ ಮನವಿ ಪತ್ರ ಸಲ್ಲಿಸಿದರೆ, ಅದನ್ನು ಸಕ್ಷಮ ಪ್ರಾಧಿಕಾರವು ಪರಿಗಣಿಸಬೇಕು ಹಾಗೂ ಕಾನೂನು ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚಿಸಿದೆ.