ಉಡುಪಿ: ಈ ಬಾರಿಯ ನವರಾತ್ರಿಗೆ ಆಕಾಶದಲ್ಲಿ ಅತಿಥಿಯ ದರ್ಶನವಾಗಲಿದೆ. ಅದುವೇ ಇ/2023 ಅ3 ಹೆಸರಿನಿಂದ ಗುರುತಿಸಲ್ಪಟ್ಟ ಧೂಮಕೇತು. ಇದರ ಬಗ್ಗೆ ವರದಿ ಇಲ್ಲಿದೆ. ಒಂದು ಧೂಳು ಹಾಗೂ ಹಿಮ - ಕಲ್ಲಿನ ಉಂಡೆಯು, ಸೌರಮಂಡಲದ ಅಂಚಿನಿಂದ ಸುಮಾರು ಲಕ್ಷ ವರ್ಷಗಳ ಹಿಂದೆ ತನ್ನ ಸ್ಥಾನದಿಂದ ಸೂರ್ಯನ ಸುತ್ತ ಒಂದು ಕಕ್ಷೆಯಲ್ಲಿ ಹೊರಟಿತ್ತು. ಇದನ್ನು ಹಿಂದಿನ ವರ್ಷ ಚೀನಾದ ತ್ಸುಚಿನ್ಶಾನ್ ಒಬ್ಸರ್ವೆಟರಿ ಮತ್ತು ದಕ್ಷಿಣ ಆಫ್ರಿಕಾದ ಅಟ್ಲಾಸ್ ಒಬ್ಸರ್ವೆಟರಿಯ ಖಗೋಳಶಾಸ್ತ್ರಜ್ಞರು 2023ರ ಜ. 9ರಂದು ಸೆರೆಹಿಡಿದರು. ಇದು ಆವರ್ತಕವಲ್ಲದ ಧೂಮಕೇತು.
ಜನವರಿ ತಿಂಗಳ ಮೊದಲಾರ್ಧದಲ್ಲಿ ಮೊದಲನೇ ಬಾರಿ ವೀಕ್ಷಿಸಿರುವ 3ನೇ ಧೂಮಕೇತು. ಆವರ್ತಕವಲ್ಲದ ಧೂಮಕೇತುಗಳೆಲ್ಲ ಸೌರಮಂಡಲ ಹೊರಭಾಗದಲ್ಲಿ ಊರ್ಟ್ ಕ್ಲೌಡ್ನಿಂದ ಬರುತ್ತವೆ. ಈ ಊರ್ಟ್ ಕ್ಲೌಡ್ ಸೂರ್ಯನಿಂದ ಸುಮಾರು 2000 ಖಗೋಳಮಾನ (1 ಖಗೋಳ ಮಾನ = 150 ಮಿಲಿಯ ಕಿ.ಮೀ.: ಭೂಮಿ-ಸೂರ್ಯನ ಮಧ್ಯದ ಅಂತರ) ದಿಂದ ಪ್ರಾರಂಭವಾಗಿ ಸುಮಾರು 2 ಲಕ್ಷ ಖಗೋಳಮಾನದ ವರೆಗೆ ವಿಸ್ತರಿಸುತ್ತದೆ. ಇಲ್ಲಿ ಕೋಟ್ಯಂತರ ಹಿಮ-ಕಲ್ಲಿನ ಉಂಡೆಗಳು ಉಂಟಾಗಿವೆ. ಇ/2023 ಅ3 ಕೂಡ ಈ ಸ್ಥಳದಿಂದಲೇ ಹೊರಟು ಸೂರ್ಯನೆಡೆ ಸಾಗಿದೆ.
ಪ್ರಕಾಶಮಾನವಾಗಿ ಗೋಚರಿಸುವ ಧೂಮಕೇತು :ಈ ಧೂಮಕೇತುವು ಸೂರ್ಯನ ಸುತ್ತ ಒಂದು ಸುಧೀರ್ಘ ವೃತ್ತಾಕಾರದ ಕಕ್ಷೆಯಲ್ಲಿ ಹಾದು ಹೋಗುತ್ತಿದೆ. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತೀ ಸಮೀಪವಾಗಿ ಈ ವರ್ಷದ ಸೆ.27ರಂದು 5.8 ಕೋಟಿ ಕಿ.ಮೀ. ದೂರದಲ್ಲಿತ್ತು. ಈ ಕಕ್ಷೆಯಲ್ಲಿ ಸೂರ್ಯನಿಗೆ ಅತಿ ಸಮೀಪಕ್ಕೆ ಬಂದು ತನ್ನ ಕಕ್ಷೆಯಲ್ಲಿ ಹಾದುಹೋಗುತ್ತಾ ಭೂಮಿಗೆ ಸಮೀಪವಾಗಿ ಈ ಧೂಮಕೇತುವು ಅ.12ರಂದು ಸುಮಾರು 70,67,200 ಕಿ.ಮೀ. ದೂರದಲ್ಲಿ 80.5 ಕಿ.ಮೀ. ಪ್ರತಿ ಸೆಕೆಂಡ್‌ನಷ್ಟು ವೇಗದಲ್ಲಿ ಹಾದು ಹೋಗುತ್ತದೆ. ಈ ಸಮಯದಲ್ಲಿ ಈ ಧೂಮಕೇತು ಪ್ರಕಾಶಮಾನವಾಗಿ ಗೋಚರಿಸುತ್ತದೆ.