ಬೆಂಗಳೂರು : ನಾಟಿಕೋಳಿಯಂತೆ ಮನೆಯ ಹಿತ್ತಿಲಲ್ಲಿ ಸಾಕಬಹುದಾದ ಬಣ್ಣದ ಬ್ರಾಯ್ಲರ್ ಕೋಳಿಗಳು ಜಿಕೆವಿಕೆ ಕೃಷಿ ಮೇಳದಲ್ಲಿ ಜನರ ಗಮನ ಸೆಳೆಯುತ್ತಿವೆ.
ನಾಟಿಕೋಳಿಗಳಿಗಿಂತ ಎರಡು-ಮೂರು ಪಟ್ಟು ದೊಡ್ಡದಾಗಿ ಬೆಳೆಯುವ, ವರ್ಷಕ್ಕೆ 100 ರಿಂದ 120 ಮೊಟ್ಟೆಗಳನ್ನು ಇಡುವ ಬಣ್ಣದ ಬ್ರಾಯ್ಲರ್ ರಾಜಾ 2 ಎಂಬ ಕೋಳಿ ಪ್ರದರ್ಶನಕ್ಕೆ ಇಡಲಾಗಿದೆ. ಈ ಕೋಳಿಗಳಿಗೆ ಸುಮಾರು 5 ವರ್ಷ ಜೀವಿತಾವಧಿ ಇದ್ದು, ಒಟ್ಟು 6 ಕೆಜಿಯಷ್ಟು ತೂಕವನ್ನು ಹೊಂದಿವೆ. ಇದರ ತಳಿಗಳಾದ ಪಿ.ಬಿ 1 ಹಾಗೂ ಪಿ.ಬಿ 2 ಅನ್ನು ಎ.ಐ.ಸಿ.ಆರ್.ಪಿ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬೇರೆ ಬೇರೆ ಪ್ರಾದೇಶಿಕ ಹವಾಗುಣಕ್ಕೆ ಹೊಂದಿಕೊಳ್ಳುವ ತಳಿಗಳನ್ನು ಕೂಡ ಅಭಿವೃದ್ಧಿ ಪಡಿಸಲಾಗುತ್ತಿದೆ.
ಈ ಕೋಳಿಗಳು ನೋಡಲು ನಾಟಿ ಕೋಳಿ ಹಾಗೂ ಗಿರಿರಾಜ ಕೋಳಿಯನ್ನ ಹೋಲುತ್ತದೆ. ಗಿರಿರಾಜ ಕೋಳಿಗಳಿಗಿಂತ ಶೀಘ್ರ ಬೆಳವಣಿಗೆ ಸಾಮರ್ಥ್ಯ ಹೊಂದಿವೆ. ಕಡಿಮೆ ಅವಧಿಯಲ್ಲಿ ಹೆಚ್ಚು ಮಾಂಸ ಉತ್ಪಾದಿಸುವ ಶಕ್ತಿ ಹೊಂದಿವೆ. ಯಾವುದೇ ವಾತಾವರಣ ಹಾಗೂ ಹವಾಮಾನಗಳಿಗೆ ಬೇಗ ಹೊಂದಿಕೊಳ್ಳುವ ಸಾಮರ್ಥ್ಯ ಕೂಡ ಇವಕ್ಕಿದೆ. ಮೆಕ್ಕೆಜೋಳದ ಪುಡಿ, ರವೆ, ಅಕ್ಕಿ ನುಚ್ಚು ಹಾಗೂ ಸೋಯಾಬಿನ್ ಅಂತಹ ಸಾಮಾನ್ಯ ಆಹಾರ ಇವಕ್ಕೆ ನೀಡಲಾಗುತ್ತದೆ.