ದಾವಣಗೆರೆ :ದಾವಣಗೆರೆಯ ಬೆಣ್ಣೆದೋಸೆ ತಿಂಡಿಗಳಲ್ಲಿ ಖ್ಯಾತಿ ಗಳಿಸಿದೆ. ಅದೇ ರೀತಿ ಇಲ್ಲಿನ ರೈತರು ಬೆಳೆಯುವ ಎಳನೀರು ಕೂಡ ಹೊರ ರಾಜ್ಯಗಳಲ್ಲಿ ಅಷ್ಟೇ ಹೆಸರುವಾಸಿ. ತೋಟಗಳಲ್ಲಿ ಬೆಳೆದ ಸಿಹಿ ನೀರಿನ ಎಳನೀರಿಗೆ ಭಾರಿ ಬೇಡಿಕೆ ಇದೆ.
ಲೋಡ್ಗಟ್ಟಲೆ ಎಳನೀರು ದಾವಣಗೆರೆಯಿಂದ ಬೇರೆ ಬೇರೆ ರಾಜ್ಯಗಳಿಗೆ ರಫ್ತಾಗುತ್ತಿತ್ತು. ಈ ಬಾರಿ ಬರಗಾಲ ಇರುವುದರಿಂದ ಎಳನೀರಿನ ಫಸಲು ಕಡಿಮೆ ಆಗಿದೆ. ಆದ್ರೂ ಹೊರರಾಜ್ಯಗಳಿಗೆ ಮೂರ್ನಾಲ್ಕು ದಿನಕ್ಕೊಮ್ಮೆ ಒಂದು ಲೋಡ್ ಎಳನೀರು ದಾವಣಗೆರೆಯಿಂದ ಹೊರರಾಜ್ಯಗಳಿಗೆ ಹೋಗುತ್ತಿದೆ. ದಾವಣಗೆರೆ ತಾಲೂಕಿನ ಜರೇಕಟ್ಟೆ ಗ್ರಾಮ ಹೊರರಾಜ್ಯಗಳಿಗೆ ಎಳನೀರು ಪೂರೈಸುವ ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ.
ಎಳನೀರು ದರ ಗಗನಕ್ಕೆ, ಹೊರರಾಜ್ಯಗಳಲ್ಲಿ ಬೇಡಿಕೆ: ''ಎಳನೀರು ಬೆಲೆ ಗಗನಕ್ಕೆ ಏರಿಕೆ ಆಗಿದ್ರು ಕೂಡ ದಾವಣಗೆರೆ ಸಿಹಿ ಎಳನೀರಿಗೆ ಹೊರರಾಜ್ಯಗಳಲ್ಲಿ ಭಾರಿ ಬೇಡಿಕೆ ಇದೆ. ಮಳೆ ಇಲ್ಲದ ಕಾರಣ ಫಸಲು ಕಡಿಮೆಯಾಗಿದೆ. ಮೊದಲೆಲ್ಲ ಒಂದು ದಿನಕ್ಕೆ ಎರಡು ಲೋಡ್ ಎಳನೀರು ಕಳುಸುತ್ತಿದ್ದೆವು. ಇದೀಗ ಎಳನೀರು ಅಭಾವ ಇರುವ ಕಾರಣ ಮೂರ್ನಾಲ್ಕು ದಿನಗಳಿಗೆ ಒಂದು ಲೋಡ್ ರಫ್ತು ಮಾಡಲಾಗುತ್ತಿದೆ. ರೂ. 28-30 ರಂತೆ ಎಳನೀರು ದಾವಣಗೆರೆಯಲ್ಲಿ ಖರೀದಿ ಮಾಡಲಾಗುತ್ತಿದೆ'' ಎಂದು ವ್ಯಾಪಾರಿ ಮಂಜುನಾಥ್ ಹೇಳಿದರು.
ಜಿಲ್ಲೆಯ ಚನ್ನಗಿರಿ, ಭರಮಸಾಗರ, ಬಸವಪಟ್ಟಣ, ಸೂಳೆಕೆರೆ, ಹರೋಸಾಗರ, ಜರೇಕಟ್ಟೆ ಗ್ರಾಮದ ತೋಟಗಳಿಂದ ಎಳನೀರು ತಂದು ರಫ್ತು ಮಾಡಲಾಗುತ್ತದೆ. ಟ್ರಾನ್ಸ್ಪೋರ್ಟ್ಗೆ ತಗಲುವ ಖರ್ಚು ವೆಚ್ಚದಿಂದ, ಖರೀದಿ ಸೇರಿ ಎಳನೀರು ದರ ಏರಿಕೆಯಾಗಿದೆ. ಮಹಾರಾಷ್ಟ್ರ, ಪುಣೆ, ಮಧ್ಯಪ್ರದೇಶ, ದೆಹಲಿ, ಗೋವಾಕ್ಕೆ ದಾವಣಗೆರೆ ಜಿಲ್ಲೆಯ ಜರೇಕಟ್ಟೆ ಗ್ರಾಮದಿಂದ ಲೋಡ್ ಮಾಡಿ ಎಳನೀರು ರಪ್ತು ಮಾಡಲಾಗುತ್ತದೆ" ಎಂದು ತಿಳಿಸಿದರು.