ಕಾರವಾರ:ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕೊಂಚ ತಗ್ಗಿದೆ. ಆದರೆ ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಗೆ ಸಮುದ್ರದ ತೀರದಲ್ಲಿ ಅಲೆಗಳ ರೌದ್ರ ನರ್ತನ ಮುಂದುವರೆದಿದೆ. ಪರಿಣಾಮ, ಕಡಲ್ಕೊರೆತ ತಡೆಗೆ ಹಾಕಿದ ಕಲ್ಲುಗಳು ಸಮುದ್ರಪಾಲಾಗಿ ರಕ್ಕಸ ಅಲೆಗಳು ಮನೆಗಳನ್ನೇ ನುಂಗುವ ಭೀತಿ ಎದುರಾಗಿದೆ.
ಜಿಲ್ಲೆಯಲ್ಲಿ ಮಳೆ ಶುರುವಾದಾಗ ರೈತರು ಖುಷಿಪಡುತ್ತಾರೆ. ಆದರೆ ಮೀನುಗಾರರು ಮತ್ತು ಸಮುದ್ರ ತೀರದಲ್ಲಿ ನೆಲೆಸಿರುವ ಜನರು ಸಮುದ್ರ ಮುನಿಸಿಕೊಳ್ಳದಿರಲಿ ಎಂದು ಪ್ರಾರ್ಥಿಸಿ ಜೀವ ಅಂಗೈಯಲ್ಲಿ ಹಿಡಿದು ಜೀವನ ನಡೆಸಬೇಕಾದ ಸ್ಥಿತಿ ಇದೆ. ಕಾರವಾರದಿಂದ ಭಟ್ಕಳದವರೆಗೂ ಪ್ರತಿವರ್ಷ ಇದೇ ಆತಂಕ.
ಕಾರವಾರದ ದೇವಭಾಗ ಹಾಗೂ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿನ ಸಮುದ್ರ ದಡದಿಂದ ಸುಮಾರು 15ರಿಂದ 20 ಮೀ. ಕಡಲ ಕೊರೆತ ಉಂಟಾಗಿದೆ. ಸಮುದ್ರದ ಆರ್ಭಟಕ್ಕೆ ಈಗಾಗಲೇ ದಡದಂಚಿನಲ್ಲಿದ್ದ 15ಕ್ಕೂ ಅಧಿಕ ತೆಂಗಿನ ಮರಗಳಲ್ಲದೇ, ತಾತ್ಕಾಲಿಕವಾಗಿ ಅಡ್ಡ ಹಾಕಿದ ಕಲ್ಲುಗಳು ಕೂಡ ಕೊಚ್ಚಿಹೋಗುತ್ತಿವೆ.