ಕರ್ನಾಟಕ

karnataka

ETV Bharat / state

ಅನರ್ಹ ರೇಷನ್​​ ಕಾರ್ಡ್​ಗಳು ಮಾತ್ರ ರದ್ದು, ಅರ್ಹ ಬಡವರಿಗೆ ಕಾರ್ಡ್​ ತಪ್ಪಿಸುವುದಿಲ್ಲ: ಸಿಎಂ ಭರವಸೆ - CM SIDDARAMAIAH

ರೇಷನ್ ಕಾರ್ಡುಗಳನ್ನು ಕಡಿತಗೊಳಿಸಲಾಗಿದೆ ಎಂಬ ಸುದ್ದಿಗೆ ಸಿಎಂ ಸಿದ್ದರಾಮಯ್ಯ ಅವರು ಅರ್ಹ ಬಡವರಿಗೆ ಕಾರ್ಡ್​ ತಪ್ಪಿಸುವುದಿಲ್ಲ. ಕೇವಲ ಅನರ್ಹ ರೇಷನ್​ ಕಾರ್ಡ್​ಗಳು ಮಾತ್ರ ರದ್ದು ಎಂದು ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (IANS)

By ETV Bharat Karnataka Team

Published : Nov 18, 2024, 1:31 PM IST

ಬೆಂಗಳೂರು: "ಅನರ್ಹರ ಕಾರ್ಡ್​ಗಳನ್ನು ಮಾತ್ರ ರದ್ದು ಮಾಡಲಾಗುವುದು. ಅರ್ಹ ಬಡವರಿಗೆ ಕಾರ್ಡು ತಪ್ಪಿಸುವುದಿಲ್ಲ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ.

ಕನಕ ಜಯಂತಿ ಪ್ರಯುಕ್ತ ಇಂದು ಶಾಸಕರ ಭವನದ ಆವರಣದಲ್ಲಿರುವ ದಾಸಶ್ರೇಷ್ಠ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾಧ್ಯಮಗಳ ಜೊತೆ ಸಿಎಂ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ (ETV Bharat)

"ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ್ದು ನಾವೇ ಹೊರತು, ಬಿಜೆಪಿಯಾಗಲಿ ಜೆಡಿಎಸ್​ ಆಗಲಿ ನೀಡಿಲ್ಲ. ಕಾರ್ಯಕ್ರಮ ಜಾರಿ ಮಾಡಿದ್ದು ಈ ಸಿದ್ದರಾಮಯ್ಯ. 2017ರಲ್ಲಿ ಒಂದು ರೂಪಾಯಿಗೆ ನೀಡುತ್ತಿದ್ದ ಅಕ್ಕಿಯನ್ನು ಉಚಿತವಾಗಿ ನೀಡಲಾಯಿತು. ಇದನ್ನು ಬಿಜೆಪಿ ಮಾಡಿಲ್ಲ. ಸುಮ್ಮನೆ ಮಾತನಾಡುತ್ತಾರೆ. ಬಿಜೆಪಿ ಅಧಿಕಾರದಲ್ಲಿರುವ ಯಾವ ರಾಜ್ಯದಲ್ಲಿ ಇಂಥ ಯೋಜನೆಯನ್ನು ಜಾರಿ ಮಾಡಿದ್ದಾರೆ. ಗುಜರಾತ್, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ, ಹರಿಯಾಣ ಎಲ್ಲಿ ಮಾಡಿದ್ದಾರೆ ಹೇಳಿ" ಎಂದು ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಅವರಿಂದ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪಾರ್ಚನೆ. (ETV Bharat)

ಏಕಾಏಕಿ ರೇಷನ್ ಕಾರ್ಡುಗಳನ್ನು ಕಡಿತಗೊಳಿಸಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಅರ್ಹರಿಗೆ ತಪ್ಪಿಸುವುದಿಲ್ಲ ಸಿಎಂ ಎಂದು ಸ್ಪಷ್ಟಪಡಿಸಿದರು.

ಹೆಚ್.ಡಿ . ಕುಮಾರಸ್ವಾಮಿಯವರಿಗೆ ಯಾವ ನೈತಿಕ ಹಕ್ಕಿದೆ: 'ಸರ್ಕಾರ ಕೇವಲ ಗ್ಯಾರಂಟಿ ಎನ್ನುತ್ತಿದೆ ತೆರಿಗೆ ಹಣ ಎಲ್ಲಿ ಹೋಗುತ್ತಿದೆ ಎಂದು ಜನರಿಗೆ ಉತ್ತರ ನೀಡಬೇಕು' ಎಂದು ಹೆಚ್​ಡಿಕೆ ನೀಡಿರುವ ಹೇಳಿಕೆಗೆ, "ಕುಮಾರಸ್ವಾಮಿ ಇರುವಾಗ ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ರಾ? ಅವರಿಗೆ ಮಾತನಾಡಲು ಯಾವ ನೈತಿಕ ಹಕ್ಕಿದೆ" ಎಂದು ಸಿಎಂ ಪ್ರಶ್ನಿಸಿದರು.

ಕನಕ ಜಯಂತಿ ಆಚರಣೆಯಲ್ಲಿ ಸಿಎಂ ಸಿದ್ದರಾಮಯ್ಯ. (ETV Bharat)

ರಾಜ್ಯಕ್ಕೆ ತೆರಿಗೆ ಹಣ ಕೊಡಿಸಲಿ: "ನಾವು ಕರ್ನಾಟಕ ರಾಜ್ಯದಿಂದ ಕೇಂದ್ರಕ್ಕೆ 4.50 ಲಕ್ಷ ಕೋಟಿ ತೆರಿಗೆಯನ್ನು ಕಟ್ಟುತ್ತೇವೆ. ನಮಗೆ ವಾಪಸ್​ ಬರುವುದು 59 ಸಾವಿರ ಕೋಟಿ ಮಾತ್ರ. ಉಳಿದ ದುಡ್ಡು ಕೇಂದ್ರದಲ್ಲಿಯೇ ಇರುತ್ತದೆ. ಅದನ್ನು ರಾಜ್ಯಕ್ಕೆ ಕೊಡಿಸಲಿ. ಬರೀ ಮಾತನಾಡಿದರೆ ಪ್ರಯೋಜನವೇನು? ಹೆಚ್. ಡಿ. ದೇವೇಗೌಡರಾಗಲಿ, ಕುಮಾರಸ್ವಾಮಿಯವರಾಗಲಿ ಕರ್ನಾಟಕಕ್ಕೆ ಅನ್ಯಾಯವಾದಾಗ ಮಾತನಾಡಿದ್ದಾರೆಯೇ" ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿ, ಪ್ರಲ್ಹಾದ್​​ ಜೋಶಿ ಮಂತ್ರಿಗಳಾಗಿ ಏನು ಮಾಡುತ್ತಿದ್ದಾರೆ? "ನಬಾರ್ಡ್​ ವತಿಯಿಂದ ಕಳೆದ ವರ್ಷ 5,600 ಕೋಟಿ ಸಾಲ ರಾಜ್ಯಕ್ಕೆ ನೀಡಲಾಗಿತ್ತು. ಈ ವರ್ಷ 2,340 ಕೋಟಿ ನೀಡಿದ್ದಾರೆ. ಇದು ಅನ್ಯಾಯವಲ್ಲವೇ? ಸಾಲದ ಪ್ರಮಾಣವನ್ನು 58% ರಷ್ಟು ಕಡಿಮೆ ಮಾಡಿದ್ದಾರೆ. ಹೆಚ್​ ಡಿ ಕುಮಾರಸ್ವಾಮಿ, ಪ್ರಲ್ಹಾದ್​ ಜೋಶಿಯವರು ಕರ್ನಾಟಕದಿಂದ ಆಯ್ಕೆ ಆಗಿ ಕೇಂದ್ರದ ಮಂತ್ರಿಗಳಾಗಿ ಏನು ಮಾಡುತ್ತಿದ್ದಾರೆ. ರೈತರಿಗೆ ಅನ್ಯಾಯ ಮಾಡಬೇಡಿ. ಇದು ದ್ರೋಹದ ಕೆಲಸ ಎಂದು ಪ್ರಧಾನ ಮಂತ್ರಿಗಳಿಗೆ, ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದೇನೆ" ಎಂದು ಸಿದ್ದರಾಮಯ್ಯ ತಿಳಿಸಿದರು.

"ನಾನು ಅಧಿಕಾರಕ್ಕೆ ಬಂದ ನಂತರ 5 ಲಕ್ಷದವರೆಗೆ ಬಡ್ಡಿರಹಿತ ಸಾಲ. 15 ಲಕ್ಷದವರೆಗೆ ಶೇಕಡಾ 3% ದರದಲ್ಲಿ ಸಾಲ ನೀಡಲಾಗಿದೆ. ನಬಾರ್ಡ್ ಬರುವುದು ಹಣಕಾಸು ಮಂತ್ರಿಗಳ ಕೆಳಗೆ. ನಿರ್ಮಲಾ ಸೀತಾರಾಮನ್ ಏನು ಮಾಡುತ್ತಿದ್ದಾರೆ. 2023-24ರ ಬಜೆಟ್​​ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರು. ಕುಮಾರಸ್ವಾಮಿ ಈ ಬಗ್ಗೆ ಏನು ಕೇಳಿದ್ದಾರೆ? 15ನೇ ಹಣಕಾಸು ಯೋಜನೆಯಡಿ 11,595 ಕೋಟಿ ಘೋಷಣೆ ಮಾಡಿದ್ದರು. ಎಲ್ಲಿ ಕೊಟ್ಟರು. ಇದನ್ನು ನೀವು ಕೇಳುವುದಿಲ್ಲವೆಂದರು". ಬಳಿಕ "ನಾವು 56,000 ಕೋಟಿ ರೂಪಾಯಿಗಳ ಗ್ಯಾರಂಟಿ ಯೋಜನೆಗಳನ್ನು ಕೊಡುತ್ತಿದ್ದೇವೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏಕೆ ಕೊಡುತ್ತಿಲ್ಲ" ಎಂದು ಸಿಎಂ ಪ್ರಶ್ನಿಸಿದರು.

ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪಾರ್ಚನೆ. (ETV Bharat)

ಗ್ಯಾರಂಟಿ ಯೋಜನೆಗಳ ಬಗ್ಗೆ ಸುಳ್ಳು ಜಾಹೀರಾತು: "ಮಹಾರಾಷ್ಟ್ರ ಜನರನ್ನು ದಾರಿ ತಪ್ಪಿಸಲು ಮತ ಗಳಿಸಲು ಮಹಾರಾಷ್ಟ್ರ ಸರ್ಕಾರ ನೀಡಿರುವ ಸುಳ್ಳು ಜಾಹೀರಾತು. ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ನಡೆಸಲು ಪರಿಶೀಲನೆ ಮಾಡಲಾಗುತ್ತಿದೆ" ಎಂದರು.

ಕನಕದಾಸರು ವಿಶ್ವಮಾನವರಾಗಿದ್ದರು: "ಕನಕದಾಸರು ಸಂತರಷ್ಟೇ ಅಲ್ಲದೇ ದಾರ್ಶನಿಕರೂ, ಸಮಾಜ ಸುಧಾರಕರೂ ಆಗಿದ್ದರು. ವಿಶ್ವಮಾನವರೂ ಆಗಿದ್ದ ಅವರ ಜಯಂತ್ಯುತ್ಸವವನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಭಕ್ತ ಕನಕದಾಸ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದರು. ಕಾಗಿನೆಲೆ ಅವರ ಕರ್ಮಭೂಮಿ. ಕಾವ್ಯ, ಕೀರ್ತನೆಗಳನ್ನು ರಚನೆ ಮಾಡಿದ್ದರು" ಎಂದು ವಿವರಿಸಿದ ಮುಖ್ಯಮಂತ್ರಿಗಳು ನಾಡಿನ ಎಲ್ಲಾ ಜನರಿಗೂ ಕನಕ ಜಯಂತಿಯ ಶುಭಾಶಯ ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಡಾ. ಹೆಚ್​. ಸಿ. ಮಹದೇವಪ್ಪ, ಪ್ರಿಯಾಂಕ್​ ಖರ್ಗೆ, ಶಿವರಾಜ್​ ತಂಗಡಗಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್​ ಸೇರಿದಂತೆ ಹಲವು ಶಾಸಕರು ಮತ್ತು ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ:ಸಿಎಂ ಬದಲಾವಣೆ ಬಗ್ಗೆ ನಮ್ಮಲ್ಲಿ ಯಾವುದೇ ಚರ್ಚೆ ಆಗಿಲ್ಲ: ಪರಮೇಶ್ವರ್

ABOUT THE AUTHOR

...view details