ಕರ್ನಾಟಕ

karnataka

ETV Bharat / state

ವಿಶ್ವವೇ ಗಮನಿಸುವ ರೀತಿ ರಾಜ್ಯ ಕಟ್ಟೋಣ, ನಿಮ್ಮ ಭರವಸೆ ಹುಸಿಗೊಳಿಸಲ್ಲ: ನಾಡಿನ‌ ಜನರಿಗೆ ಸಿಎಂ ಪತ್ರ - Siddaramaiah letter - SIDDARAMAIAH LETTER

ನಮ್ಮ ಸರ್ಕಾರ ಜನರ ಸರ್ಕಾರ, ಕರ್ನಾಟಕವನ್ನು ಇಡೀ ವಿಶ್ವವೇ ಗಮನಿಸುವ ರೀತಿಯಲ್ಲಿ ಕಟ್ಟುವ ಕಾರ್ಯದಲ್ಲಿ ನಿಮ್ಮೆಲ್ಲರ ಸಹಕಾರಗಳನ್ನು ಬಯಸುವೆ. ನೀವು ನಮ್ಮ ಮೇಲೆ ಇರಿಸಿದ ಭರವಸೆಯನ್ನು ಹುಸಿಗೊಳಿಸುವುದಿಲ್ಲ ಎಂದು ರಾಜ್ಯದ ಜನರಿಗೆ ಸಿಎಂ ಪತ್ರ ಬರೆದಿದ್ದಾರೆ.

SIDDARAMAIAH LETTER
SIDDARAMAIAH LETTER

By ETV Bharat Karnataka Team

Published : Mar 23, 2024, 8:05 AM IST

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರನ್ನು ಉದ್ದೇಶಿಸಿ ಪತ್ರವನ್ನು ಬರೆದಿದ್ದಾರೆ.‌ ಈ ಮನವಿ ಪತ್ರದಲ್ಲಿ ಸರ್ಕಾರದ ಸಾಧನೆ, ಮುಂದಿನ ಆಡಳಿತದ ದಾರಿ ಮತ್ತು ಅದಕ್ಕಾಗಿ ಜನರ ಸಹಕಾರವನ್ನು ಕೋರಿದ್ದಾರೆ.

ಸಿಎಂ ಬರೆದ ಪತ್ರದಲ್ಲೇನಿದೆ?ಕಳೆದ ವರ್ಷ ನಡೆದ ಚುನಾವಣೆಯಲ್ಲಿ ತಾವೆಲ್ಲರೂ ಭರವಸೆ ಇರಿಸಿ ನಮಗೆ ಅಧಿಕಾರ ನೀಡಿದಿರಿ, ಅಧಿಕಾರ ವಹಿಸಿಕೊಂಡ ನಂತರ ನಾವು ಒಂದು ಕ್ಷಣವನ್ನು ವ್ಯರ್ಥಗೊಳಿಸದೆ ತಮ್ಮ ಮುಂದಿರಿಸಿದ್ದ ಕನಸನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದೇವೆ. ನಾವು ನುಡಿದಂತೆ ನಡೆಯುವ ಪರಂಪರೆಯವರು. 2013-18 ರವರೆಗೆ ಆಡಳಿತ ನಡೆಸಿದಾಗಲೂ ನಾವು ಹೇಳಿದ್ದ 165 ಆಶ್ವಾಸನೆಗಳಲ್ಲಿ 158 ಆಶ್ವಾಸನೆಗಳನ್ನು ಈಡೇರಿಸುವುದರ ಜೊತೆಗೆ 30 ಫ್ಲಾಗ್‌ಶಿಪ್ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೆವು. ಈಗ ಎರಡನೆ ಬಾರಿ ಅಧಿಕಾರಕ್ಕೆ ಬಂದು ವರ್ಷ ತುಂಬುವ ಮೊದಲೇ ಎರಡು ಬಜೆಟ್‌ಗಳಲ್ಲಿ 162 ಆಶ್ವಾಸನೆಗಳನ್ನು ಈಡೇರಿಸಲು ಕ್ರಮವಹಿಸಿದ್ದೇವೆ ಎಂದಿದ್ದಾರೆ.

ಈ ಬಾರಿ ಕೇವಲ ಹತ್ತು ತಿಂಗಳ ಅವಧಿಯಲ್ಲಿ ನಾವು ಪ್ರಾರಂಭಿಸಿದ 'ಕರ್ನಾಟಕ ಮಾದರಿ ಅಭಿವೃದ್ಧಿ' ವಿಧಾನವು ಫಲ ನೀಡಲಾರಂಭಿಸಿದೆ. ಇದರ ಜೊತೆಗೆ ನಾಡಿನ ಸಾಮರಸ್ಯತೆಯ ಮತ್ತು ಸಾಮಾಜಿಕ ನ್ಯಾಯದ ಪರಂಪರೆಯನ್ನು ಮರು ಸ್ಥಾಪಿಸಲು ಹೋರಾಟ ನಡೆಸುತ್ತಿದ್ದೇವೆ. ನಮ್ಮ ಸರ್ಕಾರ ಬಸವಣ್ಣನವರನ್ನು "ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ" ಎಂದು ಘೋಷಿಸಿದೆ. ನಾಡಿನ ಹಸಿವು ನೀಗುವ ರೈತರು, ಹೊಸ ಅವಕಾಶಗಳನ್ನು ಸೃಷ್ಟಿಸುವ ಉದ್ಯಮಗಳು, ಆಧುನಿಕ ತಂತ್ರಜ್ಞಾನಾಧಾರಿತ ಆನ್ವೇಷಣೆಗಳು ಮುಂತಾಗಿ ಎಲ್ಲಾ ರಂಗಗಳಲ್ಲಿಯೂ ಕರ್ನಾಟಕವನ್ನು ಜನಸ್ನೇಹಿಯಾಗಿ ಕಟ್ಟುವ ಕೈಂಕರ್ಯದಲ್ಲಿ ತೊಡಗಿದ್ದೇವೆ. ಕೋಟ್ಯಾನುಕೋಟಿ ಜನರ ಬದುಕನ್ನು ಕಷ್ಟದಲ್ಲಿ ಮುಳುಗಿಸಿ ಶೇ.1 ರಷ್ಟು ಜನರ ಕಲ್ಯಾಣಕ್ಕಾಗಿ ದುಡಿಯುವುದನ್ನು ಪಾಶವೀ ಆಡಳಿತವೆಂದು ನಾನು ಭಾವಿಸಿದ್ದೇನೆ ಎಂದು ವಿವರಿಸಿದ್ದಾರೆ.

ನಾಡಿನ‌ ಜನರಿಗೆ ಸಿಎಂ ಪತ್ರ

ಸಮೃದ್ಧಿಯಲ್ಲಿ ಎಲ್ಲರೂ ಪಾಲು ಪಡೆಯುವಂತಾಗಬೇಕು ಎನ್ನುವ ಉದ್ದೇಶದಿಂದ ಗ್ಯಾರಂಟಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ. ಆರ್ಥಿಕ ಅಸಮಾನತೆಯಿಂದಾಗಿ ಜೀವನ ನಡೆಸಲು ಹರಸಾಹಸ ಪಡುತ್ತಿರುವ 1.2 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಈ ಯೋಜನೆಗಳು ನೆರವಾಗಿವೆ. ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಯೋಜನೆಗಳಷ್ಟರಿಂದಲೆ ಪ್ರತಿ ಅರ್ಹ ಕುಟುಂಬವೂ ಕನಿಷ್ಠ ರೂ.5000 ನೆರವನ್ನು ಪಡೆಯುತ್ತಿದೆ. ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ 1.2 ಲಕ್ಷ ಕೋಟಿಗೂ ಹೆಚ್ಚು ಅನುದಾನ ಒದಗಿಸಿದ್ದೇವೆ. ಶಿಕ್ಷಣ, ತಂತ್ರಜ್ಞಾನ, ಆರೋಗ್ಯ, ಕೃಷಿ, ಉದ್ಯಮ ಹೀಗೆ ಪ್ರತಿರಂಗಕ್ಕೂ ಸೂಕ್ತ ನೀತಿಗಳನ್ನು ರೂಪಿಸಿ ಮರು ಅನ್ವೇಷಿಸುವ ಕಾರ್ಯ ಆರಂಭಿಸಿದ್ದೇವೆ. ಇಡೀ ದೇಶದಲ್ಲಿಯೇ ಅತಿ ಹೆಚ್ಚು ಬಂಡವಾಳ ಆಕರ್ಷಿಸುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ನಮ್ಮಲ್ಲಿ ತೆರಿಗೆಗಳ ಸಂಗ್ರಹವೂ ಹೆಚ್ಚಿದೆ. ಕೇಂದ್ರದಿಂದ ತೆರಿಗೆ ವರಮಾನದಲ್ಲಿ ಬರಬೇಕಾದ ನ್ಯಾಯಯುತ ಪಾಲು ಬಾರದೆ ಸೃಷ್ಟಿಯಾದ ಬೃಹತ್ ಕೊರತೆಯನ್ನೂ ಸರಿದೂಗಿಸಿಕೊಂಡು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳುತ್ತಾ, ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಉಲ್ಲೇಖಿಸಿದ್ದಾರೆ.

ರಾಜ್ಯದಲ್ಲಿ ಬರಗಾಲವಿದೆ. ರಾಜ್ಯದ ಅನೇಕ ಕಡೆ ನೀರಿನ ಕೊರತೆ ತಲೆದೋರಿರುವುದು ನಮ್ಮ ಗಮನದಲ್ಲಿದೆ. ಇದರಿಂದಾಗಿ ಜನತೆ ಎದುರಿಸುತ್ತಿರುವ ಸಂಕಷ್ಟವನ್ನು ನೀಗಲು ನಾವು ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ. ನಮ್ಮ ಸರ್ಕಾರ ಜನರ ಸರ್ಕಾರ, ಕರ್ನಾಟಕವನ್ನು ಇಡೀ ವಿಶ್ವವೇ ಗಮನಿಸುವ ರೀತಿಯಲ್ಲಿ ಕಟ್ಟುವ ಕಾರ್ಯದಲ್ಲಿ ನಿಮ್ಮೆಲ್ಲರ ಸಹಕಾರಗಳನ್ನು ಬಯಸುವೆ. ನೀವು ನಮ್ಮ ಮೇಲೆ ಇರಿಸಿದ ಭರವಸೆಯನ್ನು ಹುಸಿಗೊಳಿಸುವುದಿಲ್ಲ, ಬುದ್ಧ, ಬಸವಣ್ಣ, ಬಾಬಾಸಾಹೇಬರು, ಗಾಂಧೀಜಿ, ಕುವೆಂಪು, ನಾರಾಯಣಗುರು, ಶಿಶುನಾಳ ಷರೀಫರಾದಿಯಾಗಿ ಎಲ್ಲ ಮಾನವತಾವಾದಿಗಳಿಂದ ಸ್ಫೂರ್ತಿ ಪಡೆಯೋಣ. ಸಂವಿಧಾನ ವಿರೋಧಿಗಳಾದ ಪಾಶವೀ ಶಕ್ತಿಗಳಿಗೆ ಈ ನೆಲದಲ್ಲಿ ಅವಕಾಶವಿಲ್ಲ ಎಂದು ಸಾಬೀತು ಪಡಿಸೋಣ. ಎದ್ದು ನಿಲ್ಲಿ. ಒಂದುಗೂಡಿ ನಡೆಯೋಣ. ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸಬೇಕೆಂಬ ಪ್ರತಿಜ್ಞೆ ಪ್ರತಿಕ್ಷಣವೂ ನಮ್ಮದಾಗಲಿ, ಕರ್ನಾಟಕದ ಹಿರಿಮೆ, ಗರಿಮೆ ಹಾಗೂ ಸ್ವಾಭಿಮಾನಗಳನ್ನು ಕಾಪಾಡಿಕೊಳ್ಳೋಣ ಎಂದು ಪತ್ರದಲ್ಲಿ ಸಿಎಂ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ನಾನು ಬದುಕಿರುವವರೆಗೆ ಕನ್ನಡಿಗನೆ, ಆರ್​ಸಿಬಿಯ ಹೆಮ್ಮೆಯ ಅಭಿಮಾನಿಯೇ: ಸಿಎಂ ಸಿದ್ದರಾಮಯ್ಯ - Cm Siddaramaih

ABOUT THE AUTHOR

...view details