ಕಾರವಾರ (ಉತ್ತರ ಕನ್ನಡ) : ಅಂಕೋಲಾ ಶಿರೂರು ಗುಡ್ಡ ಕುಸಿತದ ಪ್ರಕರಣದಲ್ಲಿ ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಳಲಾಗುತ್ತದೆ. ರಸ್ತೆ ಪೂರ್ಣ ಮಾಡದಿದ್ರೂ ಟೋಲ್ ಕಲೆಕ್ಷನ್ ಮಾಡಲಾಗ್ತಿದೆ. ರೆಸ್ಕ್ಯೂ ಆಪರೇಷನ್ ನಡೆದ ಬಳಿಕ ತಪ್ಪು ಮಾಡಿದವರ ಮೇಲೆ ಕ್ರಮ ಜರುಗಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಇಂದು ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದ ಗುಡ್ಡ ಕುಸಿತದಲ್ಲಿ 10 ಜನರು ಕಾಣೆಯಾಗಿದ್ದಾರೆ. 7 ಜನರ ಮೃತದೇಹ ದೊರಕಿದ್ದು, ಇನ್ನೂ 3 ಮೃತದೇಹ ದೊರಕಬೇಕಿದೆ. ಎಸ್ಡಿಆರ್ಎಫ್ 44, ಎನ್ಡಿಆರ್ಎಫ್ 24, ಸೇನೆಯಿಂದ 44 ಜನರು ಬಂದಿದ್ದಾರೆ. ವಾಹನಗಳು ಕೂಡಾ ಸ್ಥಳದಲ್ಲಿ ಕಾಣೆಯಾಗಿವೆ. ಟೀ ಅಂಗಡಿಯಿಟ್ಟು ವಾಸವಾಗಿದ್ದವರು ಸಾವನ್ನಪ್ಪಿದ್ದಾರೆ ಎಂದು ಸಿಎಂ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಹಾಗೂ ಶಾಸಕರಿಗೆ ರೆಸ್ಕ್ಯೂ ಆಪರೇಷನ್ ತ್ವರಿತವಾಗಿ ಮಾಡಲು ಹೇಳಿದ್ದೇನೆ. ಅಸೆಂಬ್ಲಿಯ ಕಾರಣ ಬೇಗ ಬರಲಾಗಲಿಲ್ಲ. ಆದ್ರೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ತ್ವರಿತಗತಿ ಆಪರೇಷನ್ಗೆ ಸೂಚಿಸಿದ್ದೆ. ಸಾವನ್ನಪ್ಪಿದವರ ಕುಟುಂಬಕ್ಕೆ ತಲಾ 5 ಲಕ್ಷ ರೂ. ನೀಡಲಾಗಿದೆ. ಯಾವುದೇ ಕುಟುಂಬದ ಸದಸ್ಯರ ಮೃತದೇಹ ದೊರಕಿದ್ರೆ ಅವರಿಗೂ ಪರಿಹಾರ ನೀಡಲಾಗುತ್ತದೆ ಎಂದು ಸಿಎಂ ತಿಳಿಸಿದರು.