ಕರ್ನಾಟಕ

karnataka

ETV Bharat / state

ಮಳೆ ನಡುವೆ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಸಿಎಂ ಭೇಟಿ: ಸೇನೆಯಿಂದ ರಕ್ಷಣಾ ಕಾರ್ಯಾಚರಣೆ - SHIRURU HILL COLLAPSE TRAGEDY - SHIRURU HILL COLLAPSE TRAGEDY

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಜನರು ತತ್ತರಿಸಿದ್ದಾರೆ. ಇಂದು ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ವೀಕ್ಷಿಸಿದರು.

cm siddaramaiah
ಗುಡ್ಡ ಕುಸಿತ ಸ್ಥಳದಲ್ಲಿ ಸಿಎಂ ಸಿದ್ದರಾಮಯ್ಯ, ಸೇನಾ ವಾಹನಗಳು (ETV Bharat)

By ETV Bharat Karnataka Team

Published : Jul 21, 2024, 3:41 PM IST

ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಸಿಎಂ ಭೇಟಿ (ETV Bharat)

ಕಾರವಾರ (ಉತ್ತರ ಕನ್ನಡ):ಭಾರಿ ಮಳೆಯ ನಡುವೆಯೂ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಭೇಟಿ ನೀಡಿ ವೀಕ್ಷಿಸಿದರು. ಸಿಎಂ ಸಿದ್ದರಾಮಯ್ಯ ಜೊತೆ ಸಚಿವರಾದ ಕೃಷ್ಣ ಬೈರೇಗೌಡ, ಮಂಕಾಳ ವೈದ್ಯ, ಸತೀಶ್ ಜಾರಕಿಹೊಳಿ ಸಾಥ್ ನೀಡಿದರು.

ಸಿಎಂ ಭೇಟಿ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್​ ಏರ್ಪಡಿಸಲಾಗಿತ್ತು. ಮತ್ತೆ ಗುಡ್ಡ ಕುಸಿಯುವ ಆತಂಕವಿದ್ದು, ಈ ನಡುವೆ ನಾಯಕರುಗಳು ಸ್ಥಳದ ವೀಕ್ಷಣೆ ನಡೆಸಿದರು.

ಘಟನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ ಪರಿಹಾರ ಕಾರ್ಯಾಚರಣೆ ಬಗ್ಗೆ ಎಸ್​ಡಿಆರ್​ಎಫ್​ ಹಾಗೂ ಎನ್​ಡಿಆರ್​ಎಫ್​​ ಸಿಬ್ಬಂದಿ ಜೊತೆ ಚರ್ಚೆ ನಡೆಸಿದರು. ಈ ವೇಳೆ ಲಭ್ಯವಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಬಳಸಲು, ಉನ್ನತ ಮೆಟಲ್ ಡಿಟೆಕ್ಟರ್ ಮತ್ತು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲು ಸಿದ್ದರಾಮಯ್ಯ ಸೂಚನೆ ನೀಡಿದರು.

ಶಿರೂರು ಕಾರ್ಯಾಚರಣೆಗೆ ಮಿಲಿಟರಿ: ಗುಡ್ಡ ಕುಸಿತದಲ್ಲಿ ಮಣ್ಣಿನಡಿ ಸಿಲುಕಿರುವ ಕೇರಳ‌ ಲಾರಿ ಚಾಲಕ ಅರ್ಜುನ್ ರಕ್ಷಣಾ ಕಾರ್ಯಾಚರಣೆಗೆ ಮಿಲಿಟರಿ ಪಡೆ ಆಗಮಿಸಿದೆ. ಚಾಲಕನ ಕುಟುಂಬದ ಮನವಿ ಮೇರೆಗೆ ಪ್ರಧಾನಿ ಕಚೇರಿಯು, ರಕ್ಷಣಾ ಕಾರ್ಯಾಚರಣೆ ವಿಳಂಬದ ಬಗ್ಗೆ ಮಾಹಿತಿ ಪಡೆದಿತ್ತು. ಬಳಿಕ ಗೃಹ ಸಚಿವ ಅಮಿತ್ ಶಾ ಅವರು ಕಾರ್ಯಾಚರಣೆಗೆ ಮಿಲಿಟರಿ ಪಡೆಯನ್ನ ಕಳುಹಿಸಲು ಸೂಚನೆ ನೀಡಿದ್ದರು.

ಸ್ಥಳಕ್ಕೆ ಬಂದ ಸೇನಾ ಪಡೆ (ETV Bharat)

ಅದರಂತೆ, ಭಾನುವಾರ ಮಧ್ಯಾಹ್ನ ರಕ್ಷಣಾ ಕಾರ್ಯಾಚರಣೆಗೆ ಸೇನೆ ಸ್ಥಳಕ್ಕೆ ಆಗಮಿಸಿದೆ. ಮೇಜರ್ ಅಭಿಷೇಕ್ ನೇತೃತ್ವದಲ್ಲಿ 44 ಮಂದಿ ಸೈನಿಕರು ಶಿರೂರು ತಲುಪಿದ್ದಾರೆ. ಬೆಳಗಾವಿಯಿಂದ ಹೊರಟಿದ್ದ ಸೇನಾ ತಂಡ, ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಆಗಮಿಸಿದೆ.

ಇಂತಹ ದುರ್ಘಟನೆ ನೋಡಿಲ್ಲವೆಂದ ಆರ್.ವಿ. ದೇಶಪಾಂಡೆ:ಇದಕ್ಕೂ ಮುನ್ನ ಭೇಟಿ ನೀಡಿದ್ದಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಮಾತನಾಡಿ,''30 ವರ್ಷದ ರಾಜಕೀಯ ಬದುಕಿನಲ್ಲಿ ಇಂತಹದ್ದೊಂದು ದುರ್ಘಟನೆಯನ್ನು ನೋಡಿರಲಿಲ್ಲ. ಗುಡ್ಡ ಕುಸಿತ ದುರಂತದಲ್ಲಿ 10 ಮಂದಿ ಮೃತಪಟ್ಟಿದ್ದಾರೆ. ಯಾರ ಮೇಲೂ ಆರೋಪ‌ ಮಾಡುವ ಕೆಲಸವನ್ನು ನಾನು ಮಾಡಲ್ಲ'' ಎಂದು ಹೇಳಿದರು.

''ಗುಡ್ಡ ಕುಸಿತದ ತೆರವು ಕಾರ್ಯವು ನಡೆಯಬೇಕು. ಈಗಾಗಲೇ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶಿಸುತ್ತೇನೆ'' ಎಂದರು.

''ಸಾಕಷ್ಟು ಮಂದಿ ಗಾಯಗೊಂಡು ಕುಮಟಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೆದ್ದಾರಿಗಾಗಿ ಗುಡ್ಡವನ್ನು ಅವೈಜ್ಞಾನಿಕವಾಗಿ ಕೊರೆಯಲಾಗಿದೆ. ಈ ಬಗ್ಗೆ ಜವಾಬ್ದಾರಿ ಇದ್ದವರು ಟೆಂಡರ್ ಹಂತದಲ್ಲೇ ನಿಯಮ ಹಾಕಿ ಸರಿಪಡಿಸಬೇಕು. ಇಂಜಿನಿಯರ್‌ಗಳು ಕಾಮಗಾರಿ‌ ಹಂತದಲ್ಲೇ ಈ ಬಗ್ಗೆ ಗಮನಹರಿಸಬೇಕು. ರಾಜಕಾರಣಿಗಳು ತಾಂತ್ರಿಕ ಜ್ಞಾನ ಇರದೇ ಹೇಳಿಕೆ ನೀಡುವುದು ಸರಿಯಲ್ಲ. ಮುಖ್ಯಮಂತ್ರಿಗಳು ಗುಡ್ಡಕುಸಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಪಡೆದು ಬಳಿಕ ಬೆಂಗಳೂರಿನಲ್ಲಿ ಪರಿಹಾರದ ಕುರಿತು ನಿರ್ಧರಿಸುತ್ತಾರೆ'' ಎಂದು ತಿಳಿಸಿದರು.

''ಈ ದುರಂತದಲ್ಲಿ ಅನಾವಶ್ಯಕ ಚರ್ಚೆ ಮಾಡಬಾರದು. ಈಗಾಗಲೇ ಜಿಲ್ಲಾಡಳಿತ ಕ್ರಮ ತೆಗೆದುಕೊಂಡಿದೆ. ಕಾಣೆಯಾದ ಅರ್ಜುನ್ ಅವರ ಕುಟುಂಬದವರು ತಿಳಿಸಿದ ಲೊಕೆಷನ್​ನಲ್ಲಿಯೇ ಶೋಧ ಕಾರ್ಯ ನಡೆಯುತ್ತಿದೆ‌. ವೈಜ್ಞಾನಿಕವಾಗಿ ಅಭಿವೃದ್ಧಿ ಕಾರ್ಯ ಮಾಡಬೇಕು.‌ ಅದಕ್ಕೆ ಸೂಕ್ತ ಚರ್ಚೆಯ ಅವಶ್ಯಕತೆ ಇದೆ. ಶೋಧ ಕಾರ್ಯ ಪಕ್ಷಾತೀತವಾಗಿ ನಡೆಯುತ್ತಿದೆ'' ಎಂದು ಹೇಳಿದರು.

ಇದನ್ನೂ ಓದಿ:ಶಿರೂರು ಗುಡ್ಡ ಕುಸಿತದಲ್ಲಿ ಮತ್ತೋರ್ವ ನಾಪತ್ತೆ; ಪೊಲೀಸರಿಗೆ ದೂರು ನೀಡಿದ ಯುವಕನ ತಾಯಿ - Shiruru Hill Collapse

ABOUT THE AUTHOR

...view details