ಬೆಂಗಳೂರು:ಅಯೋಧ್ಯೆ ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇನ್ನು ಕೆಲವೇ ಹೊತ್ತಲ್ಲಿ ಶುರುವಾಗಲಿದೆ. ಇದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಹೊರವಲಯದಲ್ಲಿ ನೂತನವಾಗಿ ನಿರ್ಮಿಸಿರುವ ರಾಮನ ದೇವಸ್ಥಾನವೊಂದನ್ನು ಉದ್ಘಾಟಿಸಲಿದ್ದಾರೆ.
ಬಿದರಹಳ್ಳಿ ಹೋಬಳಿಯಲ್ಲಿನ ವಿರೋಗ ನಗರದಲ್ಲಿ ಶ್ರೀರಾಮ ಟೆಂಪಲ್ ಟ್ರಸ್ಟ್ ವತಿಯಿಂದ ಸೀತಾ, ರಾಮ ಮತ್ತು ಲಕ್ಷ್ಮಣ ಹಾಗು 33 ಅಡಿ ಎತ್ತರದ ಏಕಶಿಲಾ ಆಂಜನೇಯ ಸ್ವಾಮಿಯ ನೂತನ ಶಿಲಾ ಪ್ರತಿಷ್ಠಾಪನಾ ಮಹಾಕುಂಭಾಭಿಷೇಕ ಮಹೋತ್ಸವದಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಎರಡು ಗಂಟೆಯವರೆಗೆ ಮಹಾಕುಂಭಾಭಿಷೇಕ ಮಹೋತ್ಸವ ನಡೆಯಲಿದೆ.
ಅಯೋಧ್ಯೆ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ವೈಭವದಿಂದ ಜರುಗಲಿದೆ. ಮಧ್ಯಾಹ್ನ 12 ಗಂಟೆಯಿಂದ ಮೂರು ಗಂಟೆಯವರೆಗೆ ಪ್ರಾಣ ಪ್ರತಿಷ್ಠಾಪನೆಯ ವಿಧಿ ವಿಧಾನಗಳು ನೆರವೇರಲಿವೆ. ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಾಪನಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು. ಕಾಂಗ್ರೆಸ್ ಪಕ್ಷ ಈ ಐತಿಹಾಸಿಕ ಕಾರ್ಯಕ್ರಮವನ್ನು ಬಹಿಷ್ಕರಿಸಿದೆ. ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರವೂ ಅಂತರ ಕಾಯ್ದುಕೊಂಡಿದೆ.