ಬೆಂಗಳೂರು:ಮಕ್ಕಳಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕರ್ನಾಟಕ ಟ್ರಸ್ಟ್ ಹಮ್ಮಿಕೊಂಡಿದ್ದ 'ಸಂವಿಧಾನದ ಓದು' ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುಮಾನ ವಿತರಿಸಿದರು. ಬಳಿಕ ಅವರು, ಒಂದು ಗಂಟೆ ಕಾಲ ಸಂವಿಧಾನ ಕುರಿತು ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡರು.
ಸಂವಿಧಾನದ ಶ್ರೇಷ್ಠತೆ ಮತ್ತು ವಿಫಲತೆ ಅದು ಯಾರ ಕೈಯಲ್ಲಿದೆ ಎನ್ನುವವರ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂಬ ಅಂಬೇಡ್ಕರ್ ಮಾತನ್ನು ಮತ್ತು ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಕವಿ ಕುವೆಂಪು ಮಾತುಗಳನ್ನು ಉಲ್ಲೇಖಿಸಿ ಸಿಎಂ ಪಾಠ ಮುಂದುವರೆಸಿದರು.
ವಿದ್ಯಾರ್ಥಿಗಳಿಗೆ ಸಂವಿಧಾನ ಪಾಠ ಮಾಡಿದ ಸಿಎಂ ಸಿದ್ದರಾಮಯ್ಯ (ETV Bharat) ಸಂವಿಧಾನದ ಬಗ್ಗೆ ಗೌರವ ಇಲ್ಲದವರ ಕೈಗೆ ಹೋದರೆ, ಎಷ್ಟೇ ಒಳ್ಳೆಯ ಸಂವಿಧಾನವಾದರೂ ಪರಿಣಾಮ ಕೆಟ್ಟದಾಗಿರುತ್ತದೆ. ಸಂವಿಧಾನದ ಪೀಠಿಕೆಯಲ್ಲೇ ಇಡೀ ಸಂವಿಧಾನದ ಸಾರಾಂಶವಿದೆ. ಜಾತ್ಯತೀತತೆ, ಸಾಮಾಜಿಕ ನ್ಯಾಯ ಎರಡೂ ಮೂಲ ಸಂವಿಧಾನದಲ್ಲಿ ಇರಲಿಲ್ಲ. ಬಳಿಕ ಸೇರ್ಪಡೆಯಾಯಿತು. ಇದನ್ನು ತೆಗೆಯಬೇಕು ಎಂದು ಕೆಲವರು ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಆದರೆ ಕೋರ್ಟ್ ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಿತು. ಭಾರತ ಬಹುತ್ವದ ದೇಶ. ಎಲ್ಲಾ ಜಾತಿ, ಧರ್ಮದವರನ್ನು ಸಮಾನವಾಗಿ ನಡೆಸಿಕೊಳ್ಳುವುದು ನಮ್ಮ ದೇಶದ ಗುಣ. ಇದೇ ಸಂವಿಧಾನದ ಮೌಲ್ಯ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಗೆ ಬಹುಮಾನ ವಿತರಿಸಿದ ಸಿಎಂ (ETV Bharat) ದೇಶದಲ್ಲಿ ಅಸಮಾನತೆ ಸೃಷ್ಟಿಯಾಗಿದ್ದು ಜಾತಿ ವ್ಯವಸ್ಥೆಯಿಂದ. ಜಾತಿ ಆಧಾರದ ಮೇಲೆ ಒಬ್ಬರ ಯೋಗ್ಯತೆ ಅಳೆಯುವುದು ಅನಾಗರಿಕತನ. ವಿದ್ಯೆ ಮತ್ತು ಸಂಪತ್ತು ಗಳಿಸುವ ಅವಕಾಶ ಶೂದ್ರರಿಗೆ ಮತ್ತು ಮಹಿಳೆಯರಿಗೆ ಇರಲಿಲ್ಲ. ಹೀಗಾಗಿ ಅಸಮಾನತೆ ಸೃಷ್ಟಿಯಾಯಿತು. ಪೋಷಕರು ವಿದ್ಯಾವಂತರಾದರೆ ಮಾತ್ರ ಮಕ್ಕಳನ್ನೂ ವಿದ್ಯಾವಂತರನ್ನಾಗಿ ಮಾಡುತ್ತಾರೆ ಎನ್ನುತ್ತಾ, ತಾವು ವಿದ್ಯಾಭ್ಯಾಸದಿಂದ ವಂಚಿತರಾಗಿ ಬಳಿಕ ವಿದ್ಯೆ ಕಲಿತು ವಕೀಲರಾದ ಪ್ರಸಂಗವನ್ನು ವಿವರಿಸಿದರು.
ಹಕ್ಕುಗಳು ಗೊತ್ತಿದ್ದರೆ ಮಾತ್ರ ಪಡೆಯಲು ಸಾಧ್ಯ:ನಮ್ಮ ಸಂವಿಧಾನದ ಹಕ್ಕುಗಳು ಏನೇನು ಅಂತ ಗೊತ್ತಿದ್ದರೆ ಮಾತ್ರ ಅವನ್ನು ಪಡೆದುಕೊಳ್ಳಬಹುದು. ಏಳು ಸ್ವಾತಂತ್ರ್ಯಗಳನ್ನು ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಇದನ್ನೆಲ್ಲಾ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗೆ ಬಹುಮಾನ ವಿತರಿಸಿದ ಸಿಎಂ (ETV Bharat) ಸಂವಿಧಾನದ್ರೋಹಿಗಳು, ಸಮಾಜದ್ರೋಹಿಗಳು ಜನ ವಿರೋಧಿಗಳೂ ಕೂಡ ಹೌದು. ಜಾತಿ, ಧರ್ಮದ ಹೆಸರಲ್ಲಿ ಒಬ್ಬರನ್ನು ಅಗೌರವದಿಂದ ಕಾಣುವುದು, ಮತ್ತೊಬ್ಬರು ಸಂವಿಧಾನೇತರ ಗೌರವ ನಿರೀಕ್ಷಿಸುವುದು ತಪ್ಪು. ಬಸವಣ್ಣನವರು 850 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆ ಮತ್ತು ಕರ್ಮ ಸಿದ್ದಾಂತವನ್ನು ಧಿಕ್ಕರಿಸಿದ್ದಾರೆ. ಆದರೆ, ಇವತ್ತಿಗೂ ಇದು ಪೂರ್ತಿ ಹೋಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ವಿಕಲಚೇತನರ ಶ್ರೇಯೋಭಿವೃದ್ಧಿಗೆ 44 ಕೋಟಿ ರೂಪಾಯಿ ಮಂಜೂರು ಮಾಡುವೆ: ಸಿಎಂ ಸಿದ್ದರಾಮಯ್ಯ