ದಕ್ಷಿಣ ಕನ್ನಡ/ಬೆಳಗಾವಿ:ಶಾಲಾ ಪ್ರವಾಸದ ಅಂಗವಾಗಿ ಬೆಳಗಾವಿ ಸುವರ್ಣಸೌಧಕ್ಕೆ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಿಳಿನೆಲೆ, ಕೈಕಂಬ ಸರ್ಕಾರಿ ಪ್ರಾಥಮಿಕ ಶಾಲೆಸಹಿತ ಇತರೆ ವಿದ್ಯಾರ್ಥಿಗಳು ಭೇಟಿ ನೀಡಿದ್ದರು. ಈ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಭವ ಮಂಟಪದ ಬಗ್ಗೆ ಪಾಠ ಮಾಡಿದರು.
ಬಿಳಿನೆಲೆ, ಕೈಕಂಬ ಶಾಲೆಯಿಂದ ಸುಮಾರು 33 ಮಕ್ಕಳು ಪ್ರವಾಸಕ್ಕೆ ಶಿಕ್ಷಕರೊಂದಿಗೆ ಆಗಮಿಸಿದ್ದರು. ಸುವರ್ಣಸೌಧಕ್ಕೆ ಭೇಟಿ ನೀಡಿದ್ದ ಅವರು ಮೊದಲಿಗೆ ಸಭಾಪತಿ ಯು.ಟಿ.ಖಾದರ್ ಅವರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ನೋಡದೆ ಸಂವಿಧಾನ ಪೀಠಿಕೆಯನ್ನು ಖಾದರ್ ಎದುರು ವಾಚಿಸಿದರು.
ಇದಕ್ಕೆ ಮೆಚ್ಚುಗೆ ಸೂಚಿಸಿದ ಖಾದರ್, ಮಕ್ಕಳಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಅವಕಾಶ ಒದಗಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎದುರೂ ಕೂಡಾ ಮಕ್ಕಳು ನೋಡದೆ ಸಂವಿಧಾನ ಪೀಠಿಕೆ ವಾಚಿಸಿದರು. ಇದಕ್ಕೆ ಸಿಎಂ ಮೆಚ್ಚುಗೆ ಸೂಚಿಸಿ ಮಕ್ಕಳನ್ನು ಮತ್ತು ಶಿಕ್ಷಕರನ್ನು ಶ್ಲಾಘಿಸಿದರು.