ಬೆಂಗಳೂರು: ''ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿರುವ ಹೊತ್ತಲ್ಲಿ, ಈ ಅನಾಹುತಗಳನ್ನು ತಡೆಯುವ ಪರಿಣಾಮಕಾರಿ ಘೋಷಣೆ ಮತ್ತು ಕಾರ್ಯಕ್ರಮಗಳನ್ನು ಪ್ರಣಾಳಿಕೆಯಲ್ಲಿ ರೂಪಿಸುತ್ತೇವೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕ್ಯಾಪಿಟಲ್ ಹೋಟೆಲ್ನಲ್ಲಿ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ''ದೇಶದಲ್ಲಿ ಆಗಿರುವ ಅಭಿವೃದ್ಧಿ, ಜಾರಿ ಆಗಿರುವ ಸಾಮಾಜಿಕ ಭದ್ರತೆ, ಆಹಾರ ಭದ್ರತೆ ಕಾರ್ಯಕ್ರಮಗಳಲ್ಲಿ ಬಹುತೇಕ ಎಲ್ಲವೂ ಕಾಂಗ್ರೆಸ್ ಅವಧಿಯವು. ಮನಮೋಹನ್ ಸಿಂಗ್ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ, ಶಿಕ್ಷಣ ಹಕ್ಕು ಮತ್ತು ಮಾಹಿತಿ ಹಕ್ಕು ಕಾಯ್ದೆಗಳು ಜಾರಿ ಆದವು'' ಎಂದು ಮುಖ್ಯಮಂತ್ರಿಗಳು ಪಟ್ಟಿ ಮಾಡಿದರು.
''ದೇಶದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವಾಗ್ದಾನಗಳನ್ನು ಕೊಡಬೇಕು ಮತ್ತು ಅವುಗಳನ್ನು ಈಡೇರಿಸಬೇಕು. ನಾವು ಜನರ ವಿಶ್ವಾಸ ಉಳಿಸಿಕೊಳ್ಳುವಂತಹ ವಾಗ್ದಾನ ನೀಡಬೇಕು ಎನ್ನುವುದು ಕಾಂಗ್ರೆಸ್ ಬದ್ಧತೆ. 2013ರಲ್ಲಿ ನೀಡಿದ್ದ ವಾಗ್ದಾನಗಳನ್ನು ನಮ್ಮ ಸರ್ಕಾರ ಶೇ.98ರಷ್ಟು ಈಡೇರಿಸಿದೆ. 2024ರಲ್ಲೂ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಉಳಿದ ಭರವಸೆಗಳನ್ನು ಯಶಸ್ವಿಯಾಗಿ ಜಾರಿ ಮಾಡುತ್ತಿದ್ದೇವೆ'' ಎಂದರು.
ಬದಲಾವಣೆ ತರುವ ಯೋಜನೆ ತಂದಿಲ್ಲವೆಂದ ಡಿಕೆಶಿ:ಇದೇ ವೇಳೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ''ನಾವು ಕರ್ನಾಟಕದಲ್ಲಿ ಪ್ರಣಾಳಿಕೆ ಸಿದ್ಧಪಡಿಸುವಾಗಲೂ ಇದೇ ರೀತಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಅವುಗಳ ಆಧಾರದ ಮೇಲೆ, ಜನ ಸಾಮಾನ್ಯರಿಗೆ ನೆರವಾಗಲು 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆವು. ಮನಮೋಹನ್ ಸಿಂಗ್ ಅವರ 10 ವರ್ಷಗಳ ಅಧಿಕಾರ ಅವಧಿಯಲ್ಲಿ ಜನರ ಬದುಕು ಕಟ್ಟಿಕೊಡುವ ಬಗ್ಗೆ ಆಲೋಚನೆ ಮಾಡಲಾಗಿತ್ತು. ಬಿಜೆಪಿಯ 10 ವರ್ಷಗಳ ಅವಧಿಯಲ್ಲಿ ಜನರ ಬದುಕಿನಲ್ಲಿ ಬದಲಾವಣೆ ತರುವಂತಹ ಒಂದು ಯೋಜನೆ ತರಲಿಲ್ಲ. ನಮ್ಮ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ, ಗ್ರಾಮೀಣ ಉದ್ಯೋಗ ಖಾತ್ರಿ, ಶೈಕ್ಷಣಿಕ ಹಕ್ಕು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದೆವು'' ಎಂದರು.