ಕರ್ನಾಟಕ

karnataka

By ETV Bharat Karnataka Team

Published : Mar 21, 2024, 8:21 PM IST

ETV Bharat / state

ನರೇಂದ್ರ ಮೋದಿ ಹಿಂದಿರುವ “ದುಷ್ಟ ಶಕ್ತಿ’’ ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ: ಸಿಎಂ ಸಿದ್ದರಾಮಯ್ಯ - CM siddaramaiah DEMAND

ನರೇಂದ್ರ ಮೋದಿ ಹಿಂದಿರುವ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದ್ದು, ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದಿರುವ “ದುಷ್ಟ ಶಕ್ತಿ’’ ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಿಎಂ, ನರೇಂದ್ರ ಮೋದಿಯವರು ಒಂದು ಮುಖವಾಡ ಅಷ್ಟೆ, ಅದರ ಹಿಂದೆ ಸರ್ಕಾರವನ್ನು ಮನ್ನಡೆಸವ ಒಂದು “ದುಷ್ಟ ಶಕ್ತಿ’’ ಇದೆ ಎಂದು ನಮ್ಮ ನಾಯಕರಾಗಿರುವ ರಾಹುಲ್ ಗಾಂಧಿಯವರು ಹೇಳಿರುವುದು ಸರಿಯಾಗಿದೆ. ಈ “ದುಷ್ಟ ಶಕ್ತಿ’’ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಲಯವನ್ನು ಕೂಡಾ ಬುಡಮೇಲು ಮಾಡಲು ಹೊರಟಿದೆ. ಇದನ್ನು ತಡೆಯುವ ಶಕ್ತಿ ಇರುವುದು ಚುನಾವಣೆಗೆ ಮಾತ್ರ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕ್ರಮ ಅಧಿಕಾರದ ದುರುಪಯೋಗ ಮಾತ್ರವಲ್ಲ ವಿರೋಧ ಪಕ್ಷಗಳನ್ನು ಹಣಿಯುವ ಸರ್ವಾಧಿಕಾರಿ ನಡೆಯಾಗಿದೆ. ಕಾನೂನು ಬಾಹಿರವಾದ ಈ ಕ್ರಮವನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ನಿರ್ದೆಶನ ನೀಡಬೇಕು ಎಂದು ಆಗ್ರಹಪಡಿಸುತ್ತೇನೆ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಚುನಾವಣಾ ಸಮಯದಲ್ಲಿ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿ ಕಾಂಗ್ರೆಸ್ ಪಕ್ಷ ಹಣದ ಕೊರತೆಯಿಂದ ಗೋಳಾಡುವಂತೆ ಮಾಡಬೇಕು ಎನ್ನುವುದು ಬಿಜೆಪಿ ಸರ್ಕಾರದ ದುರುದ್ದೇಶವಾಗಿದೆ. ನಮ್ಮ ಪಕ್ಷದ ಖಾತೆಯಲ್ಲಿರುವುದು ಪಕ್ಷದ ಅಭಿಮಾನಿಗಳಾದ ಸಾಮಾನ್ಯ ಜನರಿಂದ ಸಂಗ್ರಹವಾಗಿರುವ ಹಣ, ಅದರಲ್ಲಿರುವುದು ದೊಡ್ಡ ಉದ್ಯಮಪತಿಗಳದ್ದಲ್ಲ. ಹೀಗಿದ್ದರೂ ಯಾಕೆ ಇಂತಹ ಕ್ರಮ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಚುನಾವಣಾ ಬಾಂಡ್​ಗಳ ಮೂಲಕ ಉದ್ಯಮಿಗಳಿಂದ ಸಾವಿರಾರು ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿ ತಮ್ಮ ಖಾತೆಗೆ ತುಂಬಿಸಿಕೊಂಡಿರುವ ಭಾರತೀಯ ಜನತಾ ಪಕ್ಷದ ಬಗ್ಗೆ ಚುನಾವಣಾ ಆಯೋಗ ಮೌನವಾಗಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ. ಆಯೋಗ ತಕ್ಷಣ ಇದನ್ನು ಗಮನಿಸಿ ನಮ್ಮ ಪಕ್ಷಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯಲ್ಲಿ ಸೋಲಿನ ಭಯ ಹುಟ್ಟಿಕೊಂಡಿದೆ. ಸಾರ್ವಜನಿಕವಾಗಿ ಎದೆಯುಬ್ಬಿಸಿ ಏನೇ ಕೊಚ್ಚಿಕೊಂಡರೂ ಆಂತರ್ಯದಲ್ಲಿರುವ ಆತ್ಮಸಾಕ್ಷಿ ಸತ್ಯವನ್ನೇ ಹೇಳುತ್ತದೆ. 400 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಬಾಯಲ್ಲಿ ಹೇಳಿಕೊಂಡರೂ ವಾಸ್ತವದ ಸ್ಥಿತಿ ಏನೆನ್ನುವುದು ನರೇಂದ್ರ ಮೋದಿಗೆ ಗೊತ್ತಿದೆ. ಈ ಭಯದ ಕಾರಣದಿಂದಲೇ ಕೇಂದ್ರ ಸರ್ಕಾರ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸುವ ಸೇಡಿನ ಕ್ರಮಕ್ಕೆ ಮುಂದಾಗಿದೆ ಎಂದು ಸಿದ್ದರಾಮಯ್ಯ ದೂರಿದ್ದಾರೆ.

ಇದನ್ನೂ ಓದಿ :''ನಾನೊಬ್ಬ ಸ್ಟ್ರಾಂಗ್ ಸಿಎಂ, ನಿಮ್ಮ ಹಾಗೆ ವೀಕ್ ಪಿಎಂ ಅಲ್ಲ'' : ಸಿಎಂ ಸಿದ್ದರಾಮಯ್ಯ

ABOUT THE AUTHOR

...view details