ಬೆಂಗಳೂರು: ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಆಗಾಗ ತಮ್ಮ ಅಜ್ಞಾನ ಪ್ರದರ್ಶನ ಮಾಡುತ್ತಾ ರಾಜ್ಯದ ಜನರಿಗೆ ಮನರಂಜನೆ ನೀಡುತ್ತಿರುತ್ತಾರೆ. ಗ್ಯಾರಂಟಿಗಳು ಕಾಂಗ್ರೆಸ್ ಪಕ್ಷಕ್ಕೆ ಮತ ತಂದು ಕೊಟ್ಟಿಲ್ಲ ಎನ್ನುವುದು ಅವರ ಇತ್ತೀಚಿನ ಸಂಶೋಧನೆ. ಅಶೋಕ್ ಅವರೇ, ನಿಮಗೆ ಮತ್ತು ನಿಮ್ಮ ಪಕ್ಷಕ್ಕೆ ಗ್ಯಾರಂಟಿ ಯೋಜನೆಗಳ ಬಗ್ಗೆ ಏಕೆ ಇಷ್ಟೊಂದು ಸಿಟ್ಟು? ಮತ್ಸರ? ಅದರ ಫಲಾನುಭವಿಗಳಾದ ಬಡವರು, ಮಹಿಳೆಯರು, ಯುವಜನರ ಬಗ್ಗೆ ಏಕೆ ನಿಮಗೆ ಇಷ್ಟೊಂದು ದ್ವೇಷ, ಅಸಹನೆ? ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ರಾಜ್ಯದ ಜನತೆ ಮಾತ್ರವಲ್ಲ, ದೇಶದ ಜನತೆ ಕೂಡಾ ಸೋಲಿಸಿದ್ದು ಮೋದಿ ಗ್ಯಾರಂಟಿಗಳನ್ನೇ ಹೊರತು, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನಲ್ಲ. ಅಶೋಕ್ ಅವರೇ, ಈಗಲಾದರೂ ಎಚ್ಚೆತ್ತುಕೊಂಡು ಸತ್ಯವನ್ನು ಎದುರಿಸಿ. ಕಳೆದ ಲೋಕಸಭಾ ಚುನಾವಣೆಗಿಂತ ಶೇಕಡಾ 13ರಷ್ಟು ಹೆಚ್ಚು ಮತಗಳನ್ನು ರಾಜ್ಯದ ಮತದಾರರು ಈ ಬಾರಿ ನಮಗೆ ನೀಡಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವಿನ ಮತಪ್ರಮಾಣದ ಅಂತರ ಕೇವಲ ಶೇ 0.63. ಈಗ ಹೇಳಿ ಗೆದ್ದವರು ಯಾರು? ಸೋತವರು ಯಾರು ಎಂದು ಪ್ರಶ್ನಿಸಿದ್ದಾರೆ.
ನಮ್ಮ ಗೆಲುವಿನಿಂದ ನಾವು ತೃಪ್ತರಲ್ಲದೇ ಇದ್ದರೂ ರಾಜ್ಯದ ಜನ ಗೆಲ್ಲಿಸಿದ್ದು ನಮ್ಮನ್ನು, ಸೋಲಿಸಿದ್ದು ನಿಮ್ಮನ್ನು ಎನ್ನುವುದನ್ನು ಮರೆಯದಿರಿ. ಜೆಡಿಎಸ್ ಪಕ್ಷದ ಪಾದಕ್ಕೆ ಬಿದ್ದರೂ, 26 ಸ್ಥಾನಗಳಿಂದ 17 ಸ್ಥಾನಕ್ಕೆ ನಿಮ್ಮ ಪಕ್ಷ ಕುಸಿಯುವುದನ್ನು ತಪ್ಪಿಸಲು ಆಗಲಿಲ್ಲ. ಒಂದು ಸ್ಥಾನದಿಂದ ಒಂಬತ್ತು ಸ್ಥಾನಕ್ಕೆ ನಾವು ಏರುವುದನ್ನೂ ನಿಮಗೆ ತಪ್ಪಿಸಲಾಗಲಿಲ್ಲ. ಮೊದಲು ನಿಮ್ಮ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಿ. ಆಮೇಲೆ ಕಾಂಗ್ರೆಸ್ ಪಕ್ಷದ ಚುನಾವಣಾ ಫಲಿತಾಂಶದ ವಿಶ್ಲೇಷಣೆ ನಡೆಸಿ ಎಂದಿದ್ದಾರೆ.
ಕೇವಲ ರಾಜಕೀಯ ಲಾಭದ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ನಾವು ಜಾರಿಗೆ ತಂದಿಲ್ಲ. ಅದು ನಮ್ಮ ಬದ್ಧತೆ ಮತ್ತು ರಾಜ್ಯದ ಜನರ ಮೇಲಿನ ಕಾಳಜಿ. ಕೇಂದ್ರ ಸರ್ಕಾರದ ದುರಾಡಳಿತದಿಂದ ನೆಲ ಹಿಡಿದಿರುವ ಜನತೆಗೆ ನೆರವಾಗುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಕೇಂದ್ರದ ಸರ್ಕಾರಿ ಯಂತ್ರದ ದುರುಪಯೋಗ, ಮೋದಿ ನಾಮ ಬಲ, ಅಪಾರವಾದ ಸಂಪನ್ಮೂಲಗಳ ಹೊರತಾಗಿಯೂ ಜನತೆ ನಮಗೆ ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.