ಬೆಂಗಳೂರು : ನಾನು ಬಿಜೆಪಿ - ಜೆಡಿಎಸ್ನವರ ಷಡ್ಯಂತ್ರಕ್ಕೆ ಹೆದರುವುದಿಲ್ಲ. ಅವರ ಸಂಚು, ಒಳಸಂಚು, ರಾಜಭವನ ದುರುಪಯೋಗಕ್ಕೆ ಹೆದರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಾವು ವಿಧಾನಸಭೆ ಚುನಾವಣೆಯಲ್ಲಿ 136 ಗೆದ್ದ ಬಳಿಕ ಬಿಜೆಪಿ ಆಪರೇಷನ್ ಕಮಲ ಮಾಡಲು ಯತ್ನಿಸಿದರು. ದುಡ್ಡು ಕೊಟ್ಟು ಶಾಸಕರನ್ನು ಖರೀದಿಸಲು ಯತ್ನಿಸಿದರು. ಆದರೆ, ನಮ್ಮ ಶಾಸಕರು ಅವರ ದುಡ್ಡಿನ ಆಸೆಗೆ ಬಿದ್ದಿಲ್ಲ. ಅವರ ಯತ್ನ ವಿಫಲವಾಯಿತು. ಬಡವರ ಪರವಾದ ನಮ್ಮ ಕಾರ್ಯಕ್ರಮಗಳನ್ನು ವಿರೋಧ ಮಾಡಿದರು. ಸರ್ಕಾರಕ್ಕೆ ಕಪ್ಪು ಮಸಿ ಬಳಿಯುವ ದುರಾಲೋಚನೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ (ETV Bharat) ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ: ಬಿಜೆಪಿಯವರು ಇಡೀ ದೇಶದಲ್ಲಿ ಮಾಡಿದ ರೀತಿ ಕರ್ನಾಟಕದಲ್ಲೂ ಕಾಂಗ್ರೆಸ್ ಸರ್ಕಾರ ಅಲುಗಾಡಿಸಲು ಯತ್ನಿಸುತ್ತಿದ್ದಾರೆ. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಸಂಚು ಮಾಡುತ್ತಿದ್ದಾರೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನನ್ನ ಮೇಲೆ ಮಾತ್ರ ಅಲ್ಲ, ಇಡೀ ದೇಶದ ಮೇಲೆ ಸೇಡಿನ ರಾಜಕಾರಣ ಮಾಡುತ್ತಿದೆ. ಬಿಜೆಪಿ ಯಾವತ್ತೂ ಸಂಪೂರ್ಣ ಬಲದಲ್ಲಿ ಅಧಿಕಾರಕ್ಕೆ ಬಂದಿಲ್ಲ. ಅವರು ಅಧಿಕಾರಕ್ಕೆ ಬಂದಿದ್ದು ಹಿಂಬಾಗಿಲಿನಿಂದ. ಹಣ ಬಲದಿಂದ, ಆಪರೇಷನ್ ಕಮಲದ ಮೂಲಕ ಅವರು ರಾಜ್ಯದ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ ಎಂದು ವಾಗ್ದಾಳಿ ನಡೆಸಿದರು.
ನಾನು ಹಾಕಿದ ರಿಟ್ ಪಿಟಿಷನ್ ಮೇಲೆ ನ್ಯಾಯಮೂರ್ತಿ ಇಂದು ಆದೇಶ ನೀಡಿದ್ದಾರೆ. ರಾಜ್ಯಪಾಲರ ಪ್ರಾಸಿಕ್ಯೂಷನ್ ಮಂಜೂರಾತಿಯ ಆದೇಶವನ್ನು ಪ್ರಶ್ನೆ ಮಾಡಿದ್ದೆ. ಪೂರ್ಣ ತೀರ್ಪನ್ನು ಓದಲಿಕ್ಕೆ ಆಗಿಲ್ಲ. ಪೂರ್ಣ ತೀರ್ಪು ಓದಿದ ಮೇಲೆ ಪೂರ್ಣ ಪ್ರತಿಕ್ರಿಯೆ ಕೊಡುತ್ತೇನೆ ಎಂದು ಹೇಳಿದರು.
ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ:ದೂರುದಾರರ ದೂರಿನ ಮೇಲೆ 17ಎ , 218 ಬಿಎನ್ಎಸ್ ಹಾಗೂ 19 ಪಿಸಿ ಕಾಯ್ದೆಯಡಿ ಮಂಜೂರಾತಿಗೆ ಕೋರಿದ್ದರು. ಆದರೆ, ಹೈಕೋರ್ಟ್ 17ಎ ಗೆ ಸೀಮಿತ ಮಾಡಿ ಆದೇಶ ಹೊರಡಿಸಿದೆ. ಸೆಕ್ಷನ್ 218 ಬಿಎನ್ಎಸ್ಎಸ್ ಅಡಿ ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ. ರಾಜ್ಯಪಾಲರ ಆದೇಶದಲ್ಲಿನ ಸೆಕ್ಷನ್ 17ಎ ಗೆ ಮಾತ್ರ ನ್ಯಾಯಮೂರ್ತಿಗಳು ಸೀಮಿತಗೊಳಿಸಿದ್ದಾರೆ. ತನಿಖೆಗೆ ಅನುಮತಿ ನೀಡಿದ್ದಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿಲ್ಲ ಎಂದು ತಿಳಿಸಿದರು.
ಡಿಸಿಎಂ ಸೇರಿ ಎಲ್ಲಾ ಸಚಿವರು, ಹೈಕಮಾಂಡ್ ನನ್ನ ಜೊತೆ ಇದ್ದಾರೆ: ರಾಜ್ಯದ ಜನ ನಮ್ಮ ಪಕ್ಷದ ಜೊತೆ ಇದ್ದಾರೆ. ಜನರ ಆಶೀರ್ವಾದ ನಮ್ಮ ಜೊತೆ ಇದೆ. ನಮ್ಮ ಎಲ್ಲ ಸಚಿವರು, ಡಿಸಿಎಂ ಡಿ. ಕೆ ಶಿವಕುಮಾರ್, ಪಕ್ಷದ ಕಾರ್ಯಕರ್ತರು, ಹೈಕಮಾಂಡ್ ನನ್ನ ಜೊತೆ ಇದ್ದಾರೆ ಎಂದು ಇದೇ ವೇಳೆ ತಿಳಿಸಿದರು. ಇದರ ಮೇಲೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತೇನೆ. ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಮಾಡುತ್ತೇವೆ. ನನ್ನ ಪ್ರಕಾರ ನಾನು ತಪ್ಪು ಮಾಡಿಲ್ಲ. ಹೈಕೋರ್ಟ್ ತೀರ್ಪು ನೀಡಿದ ತಕ್ಷಣ ತಪ್ಪು ಮಾಡಿದ್ದೇನೆ ಎಂದು ಅರ್ಥ ಅಲ್ಲ ಎಂದು ತಿಳಿಸಿದರು.
ನಾನು ಏಕೆ ರಾಜೀನಾಮೆ ಕೊಡಬೇಕು? : ನಾನು ಏಕೆ ರಾಜೀನಾಮೆ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಕ್ಷಗಳ ರಾಜೀನಾಮೆ ಒತ್ತಾಯಕ್ಕೆ ಮರು ಪ್ರಶ್ನಿಸಿದರು. ಕುಮಾರಸ್ವಾಮಿನೂ ಜಾಮೀನಿನಲ್ಲಿ ಹೊರಗಡೆ ಇದ್ದಾರೆ. ಅವರು ರಾಜೀನಾಮೆ ಕೊಟ್ಟಿದ್ದಾರಾ? ಅವರಿಗೆ ಯಾವ ನೈತಿಕತೆ ಇದೆ?. ನಾವು ವಿಪಕ್ಷವನ್ನು ರಾಜಕೀಯವಾಗಿ ಎದುರಿಸುತ್ತೇವೆ. ಅವರು ಜಾಮೀನು ಮೇಲೆ ಇದ್ದರೂ, ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿಲ್ವಾ? ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದರು.
ಇದಕ್ಕೆ ನಾವು ಜಗ್ಗಲ್ಲ, ಬಗ್ಗಲ್ಲ:ಇದೇ ವೇಳೆ ಮಾತನಾಡಿದ ಡಿಸಿಎಂ ಡಿ. ಕೆ ಶಿವಕುಮಾರ್, ಇದು ಬಿಜೆಪಿಯ-ಜೆಡಿಎಸ್ ಕುತಂತ್ರವಾಗಿದೆ. ಇದಕ್ಕೆ ನಾವು ಜಗ್ಗಲ್ಲ, ಬಗ್ಗಲ್ಲ. ಇಡೀ ಸರ್ಕಾರ ಸಿಎಂ ಜೊತೆ ಇದೆ. ದಿಲ್ಲಿಯಿಂದ ಹಳ್ಳಿವರೆಗೆ ಕಾಂಗ್ರೆಸ್ ಸಿಎಂ ಬೆನ್ನಿಗೆ ನಿಲ್ಲಲಿದೆ. ಯಾವ ಒತ್ತಡಕ್ಕೂ ಸರ್ಕಾರ ಮಣಿಯುವುದಿಲ್ಲ. ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ :ರಾಜ್ಯಪಾಲರು ನೀಡಿದ ಅಭಿಯೋಜನೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ತಿರಸ್ಕರಿಸಿದೆ : ಸಿಎಂ ಸಿದ್ದರಾಮಯ್ಯ - CM Siddaramaiah