ರಾಯಚೂರು: 'ನನ್ನ ಪತ್ನಿ ಎಂದೂ ರಾಜಕೀಯಕ್ಕೆ ಬಂದವಳಲ್ಲ. ಅಂತಹ ನನ್ನ ಪತ್ನಿಯನ್ನು ಬೀದಿಗೆ ತಂದರು. ನಾನು ಮಾಡಿದ ತಪ್ಪಾದರೂ ಏನು' ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ 'ಸ್ವಾಭಿಮಾನಿ ಬೃಹತ್ ಸಮಾವೇಶ'ದಲ್ಲಿ ಮೊದಲ ಬಾರಿಗೆ ತಮ್ಮ ಪತ್ನಿ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದರು.
ನಾವು ನಮ್ಮ ರಾಜಕೀಯದಲ್ಲಿ ಯಾವುದೇ ಜಾತಿ, ಧರ್ಮ ಮಾಡಿದವರಲ್ಲ. ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಕಾರ್ಮಿಕರು ಸೇರಿದಂತೆ ಎಲ್ಲ ವರ್ಗಕ್ಕೂ ಶಕ್ತಿ ತುಂಬಿಸುವಂತಹ ಕೆಲಸ ಮಾಡಿದ್ದೇವೆ. ನಮ್ಮ ಈ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಯಾವತ್ತೂ ರಾಜಕೀಯಕ್ಕೆ ಬಾರದ ನನ್ನ ಪತ್ನಿಯನ್ನು ಬೀದಿಗೆ ತಂದರು. ಇದು ನ್ಯಾಯವೇ ಎಂದು ಸಿಎಂ ಪ್ರಶ್ನಿಸಿದರು.
ನನ್ನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹಿಸುವುದಕ್ಕೆ ಆಗದೇ ಹಣಿಯುವುದಕ್ಕೆ ನೋಡುತ್ತಿದ್ದರಲ್ಲ, ನಾನು ಮಾಡಿದ ತಪ್ಪಾದರೂ ಯಾವುದು ಹೇಳಿ? ನಾನು ಹಿಂದುಳಿದ ಜಾತಿಗೆ ಸೇರಿದವನು ಅಂತ ನನ್ನ ಮೇಲೆ ಈ ದ್ವೇಷನಾ?, ಸಿದ್ದರಾಮಯ್ಯ ಕುರಿ ಕಾಯುತ್ತಿದ್ದವನ ಮಗ ಅಂತನಾ? ಎರಡನೇ ಬಾರಿಗೆ ಸಿಎಂ ಆದನಲ್ಲಾ ಅನ್ನೋ ಹೊಟ್ಟೆ ಉರಿಯೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಆರ್.ಅಶೋಕ್, ಬಿಎಸ್ವೈ, ವಿಜಯೇಂದ್ರ, ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಹೊಟ್ಟೆ ಉರಿಯಾಗಿದೆ ಎಂದು ಟೀಕಿಸಿದರು.