ಲೋಕಸಭೆ ಚುನಾವಣೆಯಲ್ಲಿ ಎನ್ಡಿಎಗೆ ಬಹುಮತ ಬರಲು ಸಾಧ್ಯವಿಲ್ಲ ಮೈಸೂರು : ''ಮತ್ತೆ ಕೇಂದ್ರದಲ್ಲಿ ಎನ್ಡಿಎಗೆ ಬಹುಮತ ಬರಲು ಸಾಧ್ಯವಿಲ್ಲ. ಇಂಡಿಯಾ ಒಕ್ಕೂಟಕ್ಕೆ ಬಹುಮತ ಬರುವ ನಿರೀಕ್ಷೆ ಇದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೈಸೂರು ನಿವಾಸದ ಬಳಿ ಮಾಧ್ಯಮದವರ ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ದೇಶದಲ್ಲಿ ಮತ್ತೆ ಎನ್ಡಿಎ ಅಧಿಕಾರಕ್ಕೆ ಬರುವ ವಿಚಾರದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಸಿಎಂ, ''ದೇಶದಲ್ಲಿ ಎನ್ಡಿಎಗೆ ಬಹುಮತ ಬರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಸಿಗಲಿದೆ'' ಎಂದರು.
ಎನ್ಐಎ ತಂಡಕ್ಕೆ ಧನ್ಯವಾದ : ''ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಆರೋಪಿಗಳನ್ನು ಎನ್ಐಎ ಹಾಗೂ ರಾಜ್ಯ ಪೊಲೀಸರು ಕೋಲ್ಕತ್ತಾದಲ್ಲಿ ಸೆರೆ ಹಿಡಿದಿದ್ಧಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ. ಉಳಿದ ವಿಚಾರಗಳು ತನಿಖೆಯಿಂದ ಗೊತ್ತಾಗಲಿದೆ'' ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯಕ್ಕೆ ಮೋದಿ ಕೊಡುಗೆ ಏನು : ''ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಬರುತ್ತಿರುವುದು ನನಗೇನೂ ಅಭ್ಯಂತರವಿಲ್ಲ. ಆದರೆ, ರಾಜ್ಯಕ್ಕೆ ಮೋದಿ ಅವರ ಕೊಡುಗೆ ಏನು? ಎಂಬುದನ್ನು ರಾಜ್ಯದ ಜನರಿಗೆ ತಿಳಿಸಲಿ'' ಎಂದು ಸಿಎಂ ಒತ್ತಾಯಿಸಿದರು.
ಚುನಾವಣಾ ರ‍್ಯಾಲಿಯಲ್ಲಿ ಸಂವಿಧಾನ ಬದಲಿಸಲು ಸಾಧ್ಯವಿಲ್ಲ ಎಂಬ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ''ಸಂವಿಧಾನ ಬದಲಿಸುತ್ತೇನೆ ಎಂದು ಸಂಸದ ಅನಂತ ಕುಮಾರ್ ಹೆಗಡೆ ಹೇಳಿದ್ದರು. ಆದರೆ ಅವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ? ಅವರು ಕೇಂದ್ರ ಸಚಿವರು ಆಗಿದ್ದಾಗಲೇ ಈ ಹೇಳಿಕೆ ನೀಡಿದ್ದರು. ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಜೊತೆಗೆ ಅನಂತ ಕುಮಾರ್ ಹೆಗಡೆ ತಮ್ಮ ಕ್ಷೇತ್ರದಲ್ಲಿ 5 ವರ್ಷ ಏನೂ ಕೆಲಸ ಮಾಡಿಲ್ಲ. ಕೊನೆಗೆ ಚುನಾವಣೆ ಸಂದರ್ಭದಲ್ಲಿ ಮನೆಯಿಂದ ಹೊರಗಡೆ ಬಂದು ಹೇಳಿಕೆಗಳನ್ನು ನೀಡುತ್ತಿದ್ದರು. ಇದರಿಂದ ಅವರು ಸೋಲುತ್ತಾರೆ ಎಂದು ಗೊತ್ತಾಗಿ ಅವರಿಗೆ ಟಿಕೆಟ್ ಕೊಡಲಿಲ್ಲ ಅಷ್ಟೇ. ಬಿಜೆಪಿ ಅವರು ಯಾವಾಗಲೂ ಸಂವಿಧಾನದ ಪರವಾಗಿ ಇಲ್ಲ'' ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ :ಮಲ್ಲಿಕಾರ್ಜುನ ಖರ್ಗೆ ತವರು ಕ್ಷೇತ್ರದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶ: ಬಿಜೆಪಿ ನಾಯಕರಿಗೆ ಟಕ್ಕರ್ - congress convention