ಬೆಂಗಳೂರು:ಸೂಪರ್ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಿಎಂ ಸಿದ್ದರಾಮಯ್ಯ ತಿರಸ್ಕರಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ. ಬೆಂಗಳೂರು ಮಹಾನಗರ, ಜಿಲ್ಲಾ ಕೇಂದ್ರಗಳ ಸೂಪರ್ ಮಾರುಕಟ್ಟೆ, ಹೈಪರ್ ಮಾರುಕಟ್ಟೆ ಹಾಗೂ ಮಾಲ್‌ಗಳಲ್ಲಿ ಸಿಎಲ್-2 (ಎ) ಎಂಬ ಹೊಸ ಸನ್ನದು ಮಂಜೂರು ಮಾಡಬೇಕು. ಕನಿಷ್ಠ 7,500 ಚದರಡಿ ವಿಸ್ತೀರ್ಣವಿರುವ ಮಾಲ್, ಸೂಪರ್ ಮಾರುಕಟ್ಟೆಗಳಲ್ಲಿ 400 ಚದರಡಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮದ್ಯ ಮಳಿಗೆ ಮಾಡಲು ಅನುಮತಿ ನೀಡಲು ಪ್ರಸ್ತಾಪ ಇತ್ತು.
ಈ ಸಂಬಂಧ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ಸೂಪರ್ ಮಾರುಕಟ್ಟೆಗಳಲ್ಲಿ ಮದ್ಯ ಮಾರಾಟ ಮಾಡಲು ಪರವಾನಗಿ ಕೊಡುವುದು ಬೇಡ ಎಂದು ಸೂಚಿಸಿದರು.