ಬೆಂಗಳೂರು: ''ಗುರುವಾರ (ಇಂದು) 16ನೇ ಕೇಂದ್ರ ಹಣಕಾಸು ಆಯೋಗದವರೊಂದಿಗೆ ಸಭೆ ನಡೆಯಲಿದೆ. 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯ ಸರಿಪಡಿಸುತ್ತಾರೆ ಎಂಬ ವಿಶ್ವಾಸವಿದೆ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಬುಧವಾರ ಸಂಜೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ವಿವರಿಸಲಾಗುವುದು. ಕರ್ನಾಟಕ, ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾದ ರಾಜ್ಯ ಎಂದು ಮನದಟ್ಟು ಮಾಡಿ, ತೆರಿಗೆ ಹಂಚಿಕೆಯನ್ನು ಶೇಕಡಾ 41ರಿಂದ ಶೇ.50ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಲಾಗುವುದು. ಸೆಸ್ ಮತ್ತು ಸರ್ಚಾಜ್ಗಳಲ್ಲಿ ರಾಜ್ಯಗಳಿಗೂ ಪಾಲು ನೀಡಬೇಕು. ಸೆಸ್ ಮತ್ತು ಸರ್ಚಾಜುಗಳು ಹೆಚ್ಚುತ್ತಿದ್ದು, ರಾಜ್ಯಕ್ಕೆ ತೆರಿಗೆ ಹಂಚಿಕೆ ಕಡಿಮೆಯಾಗುತ್ತಿರುವುದನ್ನು ಹಣಕಾಸು ಆಯೋಗದ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಡಲಾಗುವುದು'' ಎಂದರು.