ಬೆಂಗಳೂರು: ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ‘ಒಂದು ರಾಷ್ಟ್ರ, ಒಂದು ಚುನಾವಣೆ’’ ಪ್ರಸ್ತಾವ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು. ಮಾತ್ರವಲ್ಲ ಅನುಷ್ಠಾನಗೊಳಿಸಲು ಕೂಡಾ ಅಸಾಧ್ಯವಾದುದು ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇಂತಹದ್ದೊಂದು ಮಹತ್ವದ ಪ್ರಸ್ತಾವದ ಬಗ್ಗೆ ವಿರೋಧ ಪಕ್ಷಗಳ ಜೊತೆ ಸಮಾಲೋಚನೆಯನ್ನೂ ಮಾಡದೇ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿರುವುದು ನರೇಂದ್ರ ಮೋದಿ ಸರ್ಕಾರದ ದುಷ್ಟ ಉದ್ದೇಶವನ್ನು ಅನಾವರಣಗೊಳಿಸಿದೆ. ಒಂದು ಸರ್ಕಾರದ ಆದ್ಯತೆಗಳು ಏನಿರಬೇಕೆಂಬ ಸಾಮಾನ್ಯ ಜ್ಞಾನವೂ ಕೇಂದ್ರ ಸರ್ಕಾರಕ್ಕಾಗಲಿ, ಪ್ರಧಾನಮಂತ್ರಿಯವರಿಗಾಗಲಿ ಇದ್ದ ಹಾಗೆ ಕಾಣುವುದಿಲ್ಲ ಎಂದು ಹೇಳಿದ್ದಾರೆ.
ಜನರ ಗಮನ ಬೇರೆಡೆ ಸೆಳೆದುವೈಫಲ್ ಮುಚ್ಚಿಹಾಕಲು ಹೊರಟಿದ್ದಾರೆ:ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ಹಣದುಬ್ಬರದಿಂದ ದೇಶದ ಆರ್ಥಿಕತೆ ತತ್ತರಿಸುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಬವಣೆಪಡುತ್ತಿದ್ದಾರೆ. ದೇಶಾದ್ಯಂತ ಕಾನೂನು ಸುವ್ಯವಸ್ಥೆ ಮೇಲಿನ ನಿಯಂತ್ರಣ ತಪ್ಪಿಹೋಗಿದ್ದು, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ಮಿತಿಮೀರಿ ಹೋಗುತ್ತಿದೆ. ಈ ಬಗ್ಗೆ ಯೋಚನೆ ಮಾಡಲು ಕೂಡಾ ಪುರುಸೊತ್ತಿಲ್ಲದ ಪ್ರಧಾನ ಮಂತ್ರಿಗಳು ‘‘ಒಂದು ದೇಶ, ಒಂದು ಚುನಾವಣೆ’’ ಎಂಬ ಗಿಮಿಕ್ ಮೂಲಕ ಜನರ ಗಮನವನ್ನು ಬೇರೆ ಕಡೆ ಸೆಳೆದು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ.
ಒಂದು ದೇಶ, ಒಂದು ಚುನಾವಣೆ ಪ್ರಜಾಪ್ರಭುತ್ವ ವಿರೋಧಿ:ಆಡಳಿತಾರೂಢ ಬಿಜೆಪಿ ಪಕ್ಷದ ಗುಪ್ತ ಅಜೆಂಡಾವನ್ನು ಒಳಗೊಂಡಿರುವ "ಒಂದು ದೇಶ, ಒಂದು ಚುನಾವಣೆ" ಪ್ರಸ್ತಾವವನ್ನು ಸಂಸತ್ನ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಎದುರಿಸಲಿದೆ. ದೇಶದ ಜನಾಭಿಪ್ರಾಯವೂ ‘‘ಒಂದು ದೇಶ, ಒಂದು ಚುನಾವಣೆ’’ ವ್ಯವಸ್ಥೆಗೆ ವಿರುದ್ಧವಾಗಿದೆ. ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದು ಹೇಳಿದ್ದಾರೆ.