ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನ ಹಂಚಿಕೆಯಲ್ಲಿ ದುರುಪಯೋಗ ಆಗಿದೆಯೋ, ಇಲ್ಲವೋ ಎಂದು ಪತ್ತೆ ಹಚ್ಚಲು ತನಿಖೆ ಮಾಡಲಾಗುತ್ತಿದ್ದು, ಎಲ್ಲ ನಿವೇಶನಗಳನ್ನು ಅಮಾನತಿನಲ್ಲಿ ಇಡಲಾಗಿದೆ. ಹಾಗಾಗಿ ಸರ್ಕಾರಕ್ಕೆ ನಷ್ಟವಾಗಿಲ್ಲ. ನಿವೇಶನಗಳನ್ನು ಹಂಚಿಕೆ ಮಾಡಿದ್ದವರನ್ನು ವರ್ಗಾವಣೆ ಮಾಡಿ ಹಿರಿಯ ಐಎಎಸ್ ಅಧಿಕಾರಿಗಳಿಂದ ತನಿಖೆ ಮಾಡಿಸಲಾಗುತ್ತಿದೆ. ವರದಿ ಬಂದ ನಂತರ ಈ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಆಯೋಜಿಸಿದ್ದ ಭೂ ಪರಿವರ್ತನೆ ಮತ್ತು ಒಣಭೂಮಿ ನಿರ್ವಹಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಮುಡಾ ನಿವೇಶನ ಹಂಚಿಕೆಯಲ್ಲಿ ದುರುಪಯೋಗವಾಗಿದೆ ಎಂಬ ಬಿಜೆಪಿ ಆರೋಪ ಮತ್ತು ಸಿಬಿಐಗೆ ಪ್ರಕರಣ ಹಸ್ತಾಂತರ ಮಾಡಲು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲವನ್ನೂ ಸಿಬಿಐಗೆ ಹಸ್ತಾಂತರಿಸಲು ಏಕೆ ಹೇಳುತ್ತಾರೆ?. ಬಿಜೆಪಿ ಅಧಿಕಾರದಲ್ಲಿದ್ದಾಗ ಯಾವ ಪ್ರಕರಣವನ್ನೂ ಸಿಬಿಐಗೆ ಹಸ್ತಾಂತರ ಮಾಡಿದ್ದರು?. ಜಮೀನು ಕೊಟ್ಟವರಿಗೆ ಪರ್ಯಾಯವಾಗಿ ನಿವೇಶನ ನೀಡಬೇಕೆಂದು ಬಿಜೆಪಿಯೇ ಕಾನೂನು ಮಾಡಿದ್ದು ಎಂದರು.
ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ: ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಪ್ರಕರಣದಲ್ಲಿ ನನ್ನ ಪಾತ್ರವೇನಿದೆ?. ಆರ್.ಅಶೋಕ್ ಕರ್ತವ್ಯ ಲೋಪವೆಸಗಿದ್ದಾರೆ ಎಂದರೆ ರಾಜೀನಾಮೆ ಕೊಡುತ್ತಾರೆಯೇ? ಅವರ ಕಾಲದಲ್ಲಿ ಅಕ್ರಮ, ಸಕ್ರಮ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂದು ಆರೋಪ ಕೇಳಿ ಬಂದಾಗ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ. ಅದಕ್ಕೆ ರಾಜೀನಾಮೆ ಕೊಡಿ ಅಂದರೆ ಕೊಡುತ್ತಾರೆಯೇ ಎಂದು ಮರು ಪ್ರಶ್ನೆ ಮಾಡಿದರು.