ಬೆಂಗಳೂರು:ಸಿಎಂ ಸಿದ್ದರಾಮಯ್ಯ 3,71,383 ಕೋಟಿ ಗಾತ್ರದ ಆದಾಯ ಕೊರತೆಯ ಬಜೆಟ್ ಮಂಡಿಸಿದ್ದು, ಗ್ಯಾರಂಟಿ ಹೊರೆ ನೀಗಿಸಲು ಹೆಚ್ಚಿನ ಸಾಲದ ಮೊರೆ ಹೋಗಿದ್ದಾರೆ. 2024-25 ಸಾಲಿನಲ್ಲಿ 1,05,246 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ.
ಕಳೆದ ಬಾರಿ ಸಿಎಂ ಸಿದ್ದರಾಮಯ್ಯ ಮಂಡಿಸಿದ್ದ ಬಜೆಟ್ನಲ್ಲಿ ಅಂದಾಜು 85,818 ಕೋಟಿ ಸಾಲ ಮಾಡುವುದಾಗಿ ತಿಳಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿಯ ಹೊರೆ ನೀಗಿಸಲು ಮತ್ತಷ್ಟು ಸಾಲದ ಮೊರೆ ಹೋಗಿದೆ. 2024-25 ಸಾಲಿನಲ್ಲಿ 1,05,246 ಕೋಟಿ ರೂ. ಸಾಲ ಮಾಡಲು ನಿರ್ಧರಿಸಿದೆ. 2024-25 ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 6,855 ಕೋಟಿ ರೂ. ಸಾಲ, ಬಹಿರಂಗ ಮಾರುಕಟ್ಟೆ ಮೂಲಕ 96,840ಕೋಟಿ ರೂ. ಸಾಲ ಮಾಡಲು ಮುಂದಾಗಿದೆ.
ಅಧಿಕ ಆದಾಯ ಸಂಗ್ರಹದ ಗುರಿ:ಈ ಬಾರಿಬಜೆಟ್ನಲ್ಲಿ ಒಟ್ಟು 2,63,177 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿ ಪಡಿಸಲಾಗಿದೆ. 2023-24 ಸಾಲಿನ ಬಜೆಟ್ನಲ್ಲಿ ವಾರ್ಷಿಕ ಅಂದಾಜು 98,650 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಇದೀಗ ಈ ಸಾಲಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ರಾಜಸ್ವ ಸಂಗ್ರಹಣೆ ಗುರಿಯನ್ನು 1,10,000 ಕೋಟಿ ರೂ. ನಿಗದಿ ಮಾಡಿದೆ.
2023-24 ಸಾಲಿನಲ್ಲಿ ವಾರ್ಷಿಕ 36,000 ಕೋಟಿ ರೂ. ಅಬಕಾರಿ ತೆರಿಗೆ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿತ್ತು. ಆ ಪೈಕಿ ಜನವರಿ ವರೆಗೆ 28,181 ಕೋಟಿ ರೂ. ಸಂಗ್ರಹಣೆಯಾಗಿದೆ. 2024-25 ಸಾಲಿನಲ್ಲಿ ಅಬಕಾರಿ ಇಲಾಖೆಗೆ 38,525 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನಿಗದಿ ಮಾಡಿದೆ. ಜೊತೆಗೆ ಬಿಯರ್ ಸ್ಲಾಬ್ಗಳನ್ನು ಪರಿಷ್ಕರಿಸಲಾಗುವುದು ಎಂದಿದ್ದಾರೆ.
2023-24 ಸಾಲಿನಲ್ಲಿ ವಾರ್ಷಿಕ 25,000 ಕೋಟಿ ರೂ. ಮುದ್ರಾಂಕ ಹಾಗೂ ನೋಂದಣಿ ಶುಲ್ಕ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿತ್ತು. ಆ ಪೈಕಿ ಜನವರಿ ವರೆಗೆ 15,692 ಕೋಟಿ ರೂ. ಸಂಗ್ರಹಣೆಯಾಗಿದೆ. 2024-25 ಸಾಲಿನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಮೂಲಕ 26,000 ಕೋಟಿ ರೂ. ಸಂಗ್ರಹ ಗುರಿ ನಿಗದಿ ಮಾಡಿದೆ.
ಕಳೆದ ಸಾಲಿನಲ್ಲಿ ವಾರ್ಷಿಕ 11,500 ಕೋಟಿ ರೂ. ಮೋಟಾರು ವಾಹನ ತೆರಿಗೆ ಸಂಗ್ರಹದ ಬಜೆಟ್ ಗುರಿ ನಿಗದಿ ಮಾಡಲಾಗಿತ್ತು. ಆ ಪೈಕಿ ಜನವರಿವರೆಗೆ 9,333 ಕೋಟಿ ರೂ. ಸಂಗ್ರಹಣೆಯಾಗಿದೆ. ಇದೀಗ 2024-25 ಸಾಲಿನ ಬಜೆಟ್ನಲ್ಲಿ ಮೋಟಾರು ಮತ್ತು ವಾಹನ ತೆರಿಗೆ ಮೂಲಕ 13,000 ಕೋಟಿ ರೂ. ಸಂಗ್ರಹದ ಗುರಿ ನಿಗದಿ ಮಾಡಿದೆ. ಇನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ 9,000 ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನೀಡಿದೆ.