ಬೆಂಗಳೂರು: ಮೂರೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಸಂಪೂರ್ಣ ಶ್ರಮ ಹಾಕಿ ಚುನಾವಣೆ ನಿರ್ವಹಿಸಬೇಕು ಎಂದು ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಕಾವೇರಿ ನಿವಾಸದಲ್ಲಿ ನಡೆದ ಸಚಿವರ ಸಭೆಯಲ್ಲಿ ರಾಜಕೀಯ ವಿದ್ಯಮಾನ, ಉಪಚುನಾವಣೆ, ಜಾತಿಗಣತಿ, ಒಳಮೀಸಲಾತಿ, ವಾಲ್ಮಿಕಿ ಅಭಿವೃದ್ಧಿ ನಿಗಮದ ಅಕ್ರಮ, ಮುಡಾ ತನಿಖೆ ಸಂಬಂಧ ಸಮಗ್ರವಾಗಿ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಕೆಲ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಪ್ರತಿಪಕ್ಷಗಳ ಆರೋಪಗಳಿಗೆ ಸಮರ್ಥವಾಗಿ ಪ್ರತ್ಯುತ್ತರ ನೀಡಬೇಕು. ಪ್ರತಿಪಕ್ಷಗಳ ಅಕ್ರಮಗಳನ್ನು ಎತ್ತಿ ಹಿಡಿದು ಜನರ ಮುಂದಿಡಬೇಕು. ಗೊಂದಲ ಸೃಷ್ಟಿಸಲು ವಿಪಕ್ಷಗಳು ಯತ್ನಿಸಲಿದ್ದು, ಅದಕ್ಕೆ ಗಟ್ಟಿಯಾಗಿ ಪ್ರತ್ಯುತ್ತರ ನೀಡಬೇಕು ಎಂದು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.
ಪ್ರತಿ ಚುನಾವಣೆ ಸಂದರ್ಭದಲ್ಲೂ ಬಿಜೆಪಿಗರು ಸುಳ್ಳುಗಳನ್ನು ಹೇಳುತ್ತಾರೆ. ಅವರ ಸುಳ್ಳುಗಳನ್ನು ಜನರೆದುರು ಬಯಲುಗೊಳಿಸಬೇಕು. ಈ ಚುನವಣೆಯಲ್ಲೂ ಹೊಸ ಹೊಸ ಸುಳ್ಳುಗಳನ್ನು ಹೇಳುತ್ತಲೇ ಇರುತ್ತಾರೆ. ಇವುಗಳನ್ನು ಸರಿಯಾಗಿ ಕೌಂಟರ್ ಮಾಡಬೇಕು ಎಂದು ಸೂಚಿಸಲಾಗಿದೆ. ಉಪಚುನಾವಣೆ ಬಹಳ ಮಹತ್ವದ್ದಾಗಿದ್ದು, ಮೂರೂ ಕ್ಷೇತ್ರಗಳನ್ನು ಗೆಲ್ಲಬೇಕು. ಇದಕ್ಕಾಗಿ ಪ್ರತಿಯೊಬ್ಬರೂ ತಾವು ವಹಿಸಿಕೊಂಡ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕ್ಷೇತ್ರಗಳಲ್ಲಿ ಯಾರಿಗೇ ಟಿಕೆಟ್ ಸಿಕ್ಕರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸರ್ಕಾರದ ಪಂಚ ಗ್ಯಾರಂಟಿ ಅನುಷ್ಠಾನ, ಅಭಿವೃದ್ಧಿ ಯೋಜನೆ, ಕೇಂದ್ರ ಸರ್ಕಾರದ ತೆರಿಗೆ ತಾರತಮ್ಯ, ದ್ವೇಷ ರಾಜಕಾರಣದ ಬಗ್ಗೆ ಜನರಿಗೆ ಮನಮುಟ್ಟುವಂತೆ ತಿಳಿಹೇಳಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಯಿತು.