ಬೆಂಗಳೂರು:ಸಿದ್ದರಾಮಯ್ಯನವರು ನಮ್ಮ ನಾಯಕ. ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಅವರು ಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮುಂದಿನ ಚುನಾವಣೆಗೂ ಸಿಎಂ ಸಿದ್ದರಾಮಯ್ಯ ಬೇಕೇ ಬೇಕು ಎನ್ನುವ ಸಚಿವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು. ಎಲ್ಲಾ ಚುನಾವಣೆಗಳಿಗೂ ಅವರು ಬೇಕು. ಕಾಂಗ್ರೆಸ್ ಪಕ್ಷ ಎರಡು ಬಾರಿ ಸಿಎಂ ಆಗುವ ಅವಕಾಶ ಕೊಟ್ಟಿದೆ. ಸಿಎಂ ಆಗಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ದಿನ ಬೆಳಗಾದರೆ ಅವರ ಸುದ್ದಿ ಎತ್ತಿಕೊಂಡು ಅವರ ಹೆಸರು ದುರುಪಯೋಗ ಮಾಡೋದು ಬೇಡ. ನಮ್ಮಲ್ಲಿ ಗೊಂದಲದ ಯಾವ ಹೇಳಿಕೆಯೂ ಇಲ್ಲ. ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಗಮನಿಸುತ್ತಿದೆ ಎಂದರು.
ಕುಡಿಯುವ ನೀರಿಗಾಗಿ ಪಕ್ಷಾತೀತ ಹೋರಾಟ ಅನ್ನೋ ದೇವೇಗೌಡರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಸಹಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ ಸಹಿ ಮಾಡಿಸಲಿ. ಒಂದೇ ದಿನದಲ್ಲಿ ಅನುಮತಿ ಕೊಡುತ್ತೇನೆ ಅಂದಿದ್ದರೂ ಕೊಡಿಸಲಿಲ್ಲ. ಇದು ಅವರ ಹೋರಾಟ ಅಲ್ಲ. ಇದು ರಾಜ್ಯದ ಹೋರಾಟ. ಮಹಾದಾಯಿ ವಿಚಾರದ ಬಗ್ಗೆ ನಾನು ಮನವಿ ಮಾಡಿದ್ದೇನೆ. ಅವರು ಅಧಿಕಾರದಲ್ಲಿ ಇದ್ದಾರೆ. ನಾವು ಹೋರಾಟ ಮಾಡಬೇಕಾಗಿದೆ. ನಮಗೆ ರಾಜಕೀಯ ಮಾಡೋ ಅವಶ್ಯಕತೆ ಇಲ್ಲ. ನಾವು ರಾಜಕಾರಣ ಮಾಡಲ್ಲ, ಅವರಿಗೆ ರಾಜಕಾರಣ ಮಾಡಿ ರೂಢಿ ಇದೆ. ನಮಗೆ ಸಿಕ್ಕ ಅವಕಾಶದಲ್ಲಿ ಹೋರಾಟ ಮಾಡಿದ್ದೇವೆ. ನಾವು ಹೋರಾಟ ಮಾಡಿದಾಗ ಯಾವ ರೀತಿ ಟೀಕೆ ಮಾಡಿದ್ರು ಗೊತ್ತಿದೆ. ಆದರೂ ಚಿಂತೆಯಿಲ್ಲ ಅದನ್ನೆಲ್ಲಾ ಮರೆತು ರಾಜ್ಯದ ಹಿತಕ್ಕೆ ಕೆಲಸ ಮಾಡ್ತೀವಿ ಎಂದು ಹೇಳಿದರು.