ಬೆಂಗಳೂರು: ತಾಯಂದಿರ ಮರಣ ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಮುಖ ಕಾರ್ಯಕ್ರಮಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿ, ತಾಯಂದಿರ ಮರಣವನ್ನು ಶೂನ್ಯಕ್ಕೆ ಇಳಿಸಲು ವ್ಯಾಪಕ ಅಭಿಯಾನ ಆರಂಭಿಸಬೇಕು. ಹೆರಿಗೆ ಪ್ರಮಾಣಕ್ಕೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ಪ್ರಸೂತಿ ತಜ್ಞರು ಮತ್ತು ಅರವಳಿಕೆ ತಜ್ಞರನ್ನು ನೇಮಕ ಮಾಡಬೇಕು. ಇದಕ್ಕಾಗಿ ಕಡಿಮೆ ಹೆರಿಗೆ ಪ್ರಮಾಣವಿರುವ ಆಸ್ಪತ್ರೆಗಳ ವೈದ್ಯಾಧಿಕಾರಿಗಳನ್ನು ಪುನರ್ನಿಯೋಜನೆ ಮಾಡಬೇಕು. ತಾಲೂಕು ಆಸ್ಪತ್ರೆಗಳಲ್ಲಿ ತಜ್ಞ ವೈದ್ಯಾಧಿಕಾರಿಗಳ ಲಭ್ಯತೆಯನ್ನು ಖಾತ್ರಿಪಡಿಸಬೇಕು ಎಂದು ಸೂಚಿಸಿದರು.
ಪ್ರಸ್ತುತ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 11,182 ಕೋಟಿ ರೂ ಅನುದಾನ ಒದಗಿಸಲಾಗಿದ್ದು, ಇದುವರೆಗೆ 6,593 ಕೋಟಿ ರೂ. ವೆಚ್ಚ ಮಾಡಲಾಗಿದೆ. ಅನುದಾನಕ್ಕೆ ಶೇ.58.96 ಪ್ರಗತಿ ಸಾಧಿಸಲಾಗಿದೆ. ರಾಜ್ಯದಲ್ಲಿ ತಾಯಂದಿರ ಮರಣ ಅನುಪಾತ ದೇಶಕ್ಕೆ ಹೋಲಿಸಿದರೆ ಕಡಿಮೆಯಿದೆ. 2018-20ರ ಅವಧಿಯಲ್ಲಿ ರಾಜ್ಯದಲ್ಲಿ ಒಂದು ಲಕ್ಷಕ್ಕೆ 69 ಮರಣ ಸಂಭವಿಸುತ್ತಿದ್ದು, ದೇಶದ ಅನುಪಾತ 97 ಇದೆ. 2022-24ರ ಅವಧಿಯಲ್ಲಿ ರಾಜ್ಯದಲ್ಲಿ ಇದರ ಪ್ರಮಾಣ 55ಕ್ಕೆ ಇಳಿದಿದೆ ಎಂದರು.
ಔಷಧಿ ಖರೀದಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಒಟ್ಟು 3927 ಎಎನ್ಎಂ ಖಾಲಿ ಹುದ್ದೆಗಳ ಪೈಕಿ 1205 ಹಾಗೂ 2990 ಎಚ್ಐಒ ಖಾಲಿ ಹುದ್ದೆಗಳ ಪೈಕಿ 300 ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆ ಈಗಾಗಲೇ ಅನುಮೋದನೆ ನೀಡಿದೆ. ಅಗತ್ಯ ಸೇವೆಗಳಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬ ಮಾಡಬಾರದು. ಹೆಣ್ಣು ಭ್ರೂಣ ಹತ್ಯೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎಲ್ಲಾ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಆಸ್ಪತ್ರೆಗಳಲ್ಲಿ ಸ್ವಚ್ಛತೆ, ಅಗತ್ಯ ಮೂಲಸೌಕರ್ಯಗಳ ನಿರ್ವಹಣೆಗೆ ವ್ಯವಸ್ಥೆ ಮಾಡಬೇಕು. ನಗರ ಪ್ರದೇಶಗಳಲ್ಲಿ 817 ನಮ್ಮ ಕ್ಲಿನಿಕ್ಗಳನ್ನು ಮಂಜೂರು ಮಾಡಲಾಗಿದ್ದು, ಪ್ರಸ್ತುತ 512 ಕಾರ್ಯಾಚರಿಸುತ್ತಿವೆ. ಇವುಗಳನ್ನು ಇನ್ನಷ್ಟು ಬಲಪಡಿಸಲು ಕ್ರಮ ವಹಿಸಿ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ಚಿಕಿತ್ಸಾ ಪ್ಯಾಕೇಜ್ ಮೊತ್ತ ಹೆಚ್ಚಳ ಮಾಡುವ ಕುರಿತು ಪರಿಶೀಲನೆ ಮಾಡಬೇಕು. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಸಮಗ್ರ ಸುಧಾರಣೆಯಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಖಾತ್ರಿಪಡಿಸಿದರೆ ಮಾತ್ರ ಜನರ ಖಾಸಗಿ ಆಸ್ಪತ್ರೆಗಳ ಅವಲಂಬನೆ ಕಡಿಮೆ ಮಾಡಬಹುದು ಎಂದು ತಿಳಿಸಿದರು.
ಇದನ್ನೂ ಓದಿ:ಎಚ್ಎಂಪಿವಿ ಸೋಂಕಿನ ಬಗ್ಗೆ ಭಯ ಬೇಡ, ಮುಂಜಾಗ್ರತೆ ಇರಲಿ: ಸಿಎಂ ಸಿದ್ದರಾಮಯ್ಯ
ಇದನ್ನೂ ಓದಿ:ಸರ್ಕಾರದ ಅನುದಾನ ಬಳಕೆಯಲ್ಲಿ ವಿಳಂಬ, ಅಧಿಕಾರಿಗಳಿಗೆ ಸಿಎಂ ತರಾಟೆ